ಚೆನ್ನೈ: ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ ಹಾಲಿ ಆವೃತ್ತಿಯ ಐಪಿಎಲ್ (IPL 2023) ಪಂದ್ಯವೊಂದರಲ್ಲಿ ಪವಾಡ ಸೃಷ್ಟಿಸಿದ್ದರು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಅವರು ಆತಿಥೇಯ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೇ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಈ ಮೂಲಕ ಗೆಲುವಿಗೆ ಬೇಕಾಗಿದ್ದ 29 ರನ್ ಗಳನ್ನು ಬಾರಿಸಿ ಮಿಂಚಿದ್ದರು. ಇದು ಐಪಿಎಲ್ ಇತಿಹಾಸದ ದಾಖಲೆಯ ಇನಿಂಗ್ಸ್ ಎಂಬುದಾಗಿ ಹೊಗಳಿಕೆಗಳು ಕೇಳಿಬರುತ್ತಿವೆ. ಏತನ್ಮಧ್ಯೆ, ಇಂಥದ್ದೊಂದು ಸ್ಫೋಟಕ ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್‌ಗೆ ಅದರ ಪ್ರತಿಫಲ ದೊರಕಿದೆ. ಭಾರತದ ಸಿನಿಮಾ ರಂಗದ ಅದ್ವಿತೀಯ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅವರ ಇನಿಂಗ್ಸ್ ಮೆಚ್ಚಿದ್ದು ಚೆನ್ನೈಗೆ ಬಂದಾಗ ಭೇಟಿಯಾಗೋಣ ಎಂಬ ಆಫರ್ ಕೊಟ್ಟಿದ್ದಾರೆ. ಕೋಲ್ಕೊತಾ ತಂಡದ ಅವೇ (ಬೇರೆ ತಂಡದ ತವರಿಗೆ ಹೋಗಿ ಆಡುವುದು) ಪಂದ್ಯವಾಡಲು ಚೆನ್ನೈಗೆ ಹೋದಾಗ ರಜನೀಕಾಂತ್ ಅವರನ್ನು ಭೇಟಿಯಾಗಲಿದ್ದಾರೆ.
ಆ ಪಂದ್ಯ ಮುಕ್ತಾಯದ ಬಳಿಕ ರಿಂಕು ಸಿಂಗ್ ಅವರ ಇನಿಂಗ್ಸ್ ಬಗ್ಗೆ ಸಾಕಷ್ಟು ಕ್ರಿಕೆಟ್ ದಿಗ್ಗಜರು ಹಾಗೂ ಸೆಲೆಬ್ರಿಟಿಗಳು ಗುಣಗಾಣ ಮಾಡಿದ್ದರು. ಈ ಸಾಲಿನಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಕೂಡ ಸೇರ್ಪಡೆ ಇದ್ದಾರೆ. ರಿಂಕು ಸಿಂಗ್ ಅವರ ಇನಿಂಗ್ಸ್‌ಗೆ ತಾನು ಕೂಡ ಅಭಿಮಾನಿ ಎಂದು ರಜನಿಕಾಂತ್ ಅವರೇ ಹೇಳಿಕೊಂಡಿದ್ದರು. ಇದೀಗ ಯುವ ಆಟಗಾರನ ಭೇಟಿಗೆ ಮುಂದಾಗಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ ಜಹೀರ್ ಖಾನ್ ಅವರ ಜೊತೆ ಮಾತನಾಡಿದ ರಿಂಕು ಸಿಂಗ್, ರಜನಿಕಾಂತ್ ಅವರ ಜೊತೆ ಮಾತನಾಡಿದ ವಿಷಯವನ್ನು ಹೇಳಿದ್ದಾರೆ. 5 ಸಿಕ್ಸರ್ ಸಿಡಿಸಿದ ಬಳಿಕ ರಜನಿಕಾಂತ್ ಸರ್ ನನಗೆ ಕರೆ ಮಾಡಿದ್ದರು ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ : Highest Strike Rate In IPL 2023: ಐಪಿಎಲ್ 2023ರಲ್ಲಿ 200 ಪ್ಲಸ್ ರನ್ ಚೇಸ್ ವೇಳೆ ಹೆಚ್ಚು ಸ್ಟ್ರೈಕ್ರೇಟ್ ಹೊಂದಿರುವ ಆಟಗಾರರು
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಬಳಿಕ ನನಗೆ ರಜನಿಕಾಂತ್ ಸರ್ ಅವರಿಂದ ಕರೆ ಬಂದಿತ್ತು. ಚೆನ್ನೈಗೆ ಬಂದಾಗ ಖಂಡಿತವಾಗಲೂ ನಿಮ್ಮನ್ನು ಭೇಟಿಯಾಗುತ್ತೇನೆ ಎಂದಿದ್ದರು. ಮೇ 14 ರಂದು ನಾವು ಮಾತನಾಡೋಣ ಎಂದಿದ್ದಾರೆ. ಅದೇ ದಿನಾಂಕದಂದು ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಸೆಣಸಲಿವೆ. ಈ ವೇಳೆ ರಜನಿಕಾಂತ್ ಅವರನ್ನು ನಾನು ಭೇಟಿಯಾಗಬಹುದು,” ಎಂದು ರಿಂಕು ಸಿಂಗ್ ಸಂಭ್ರಮ ವ್ಯಕ್ತಪಡಿಸಿದ್ದರು.
ರಿಂಕು ಸಿಂಗ್ ಈ ಬ್ಯಾಟಿಂಗ್ ಅಬ್ಬರ ಈ ರೀತಿ ಇತ್ತು
ಏಪ್ರಿಲ್ 9ರಂದು ಪಂದ್ಯ ನಡೆದಿತ್ತು. ಅಹಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 204 ರನ್ ಬಾರಿಸಿತ್ತು. ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ 29 ರನ್‌ಗಳ ಅಗತ್ಯವಿತ್ತು. ಈ ವೇಳೆ ಕೆಕೆಆರ್ ಸೋಲು ಖಚಿತವಾಗಿತ್ತು. ಆದರೆ, ಮೊದಲನೇ ಎಸೆತದಲ್ಲಿ ಉಮೇಶ್ ಯಾದವ್ ಸಿಂಗಲ್ ಪಡೆದು, ರಿಂಕು ಸಿಂಗ್‌ಗೆ ಸ್ಟ್ರೈಕ್ ಬಿಟ್ಟುಕೊಟ್ಟಿದ್ದರು. ಇನ್ನುಳಿದ ಐದು ಎಸೆತಗಳಲ್ಲಿ ಕೆಕೆಆರ್ ಗೆಲ್ಲಲು 28 ರನ್‌ಗಳ ಅಗತ್ಯವಿತ್ತು. ರಿಂಕು ಸಿಂಗ್, ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಚ್ಚರಿಯ ರೀತಿಯಲ್ಲಿ ಪಂದ್ಯವನ್ನು ಗೆಲ್ಲಿಸಿದ್ದರು. ಈ ಇನಿಂಗ್ಸ್ ಐಪಿಎಲ್ ಇತಿಹಾಸದಲ್ಲಿಯೇ ಸ್ಮರಣೀಯ ಎನಿಸಿಕೊಂಡಿದೆ.