Site icon Vistara News

IPL 2023 : ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆ ಕೋಲ್ಕೊತಾ ತಂಡದ ರಿಂಕು ಸಿಂಗ್​

Rinku Singh of the Kolkata team is a talent who blossomed in the heat of poverty

#image_title

ಅಹಮದಾಬಾದ್​ : ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ಬ್ಯಾಟರ್​ ರಿಂಕು ಸಿಂಗ್ ಕ್ರಿಕೆಟ್​ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಕೊನೇ ಓವರ್​ನಲ್ಲಿ ಗೆಲ್ಲಲು ಬೇಕಾಗಿದ್ದ 29 ರನ್​ಗಳನ್ನು ಗಳಿಸಿದ್ದಾರೆ ಅದರಲ್ಲೂ ಸತತ ಐದು ಸಿಕ್ಸರ್​ಗಳ ಮೂಲಕ ಈ ಮೂಲಕ ಅವರು ಐಪಿಎಲ್​ ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಈ ಕ್ಷಣದಿಂದ ರಿಂಕು ಸಿಂಗ್​ ಏಕಾಏಕಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕ್ರಿಕೆಟ್​ ಕ್ಷೇತ್ರದ ಹೊಸ ಹೊಡೆಬಡಿಯ ದಾಂಡಿಗ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ರಿಂಕು ಸಿಂಗ್ ಬಡತನದಲ್ಲಿ ಅರಳಿದ ಪ್ರತಿಭೆ ಎಂಬ ಮಾಹಿತಿಯೂ ಅನಾವರಣಗೊಂಡಿದೆ. ಕ್ರಿಕೆಟ್​ನಲ್ಲಿ ಸಾಧನೆ ಮಾಡುವ ಕನಸು ಕಂಡಿರುವ ಅದಕ್ಕಾಗಿ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ ಎಂಬುದೂ ಗೊತ್ತಾಗಿದೆ.

ರಿಂಕು ಸಿಂಗ್​ ಉತ್ತರ ಪ್ರದೇಶದ ಆಲಿಗಢದವರು. 1977ರಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಅವರಿಗೆ ಕ್ರಿಕೆಟ್​ ಕ್ಷೇತ್ರಕ್ಕೆ ಬರುವುದು ಅಷ್ಟೊಂದು ಸುಲಭ ಎನಿಸಿರಲಿಲ್ಲ. ಅಭ್ಯಾಸ ಹಾಗೂ ವಿದ್ಯಾಭ್ಯಾಸವನ್ನು ಜತೆಜತೆಯಾಗಿ ತೂಗಿಸಿಕೊಂಡು ಕ್ರಿಕೆಟ್​ ಕ್ಷೇತದಲ್ಲಿ ಸಾಧನೆ ಮಾಡಬೇಕಾದರೆ ಹಣಕಾಸಿನ ನೆರವು ಬೇಕಾಗುತ್ತದೆ. ಆದರೂ ಅವರು ನಾನಾ ರೀತಿಯಲ್ಲಿ ಕಷ್ಟಪಟ್ಟು ಕ್ಲಬ್ ಒಂದನ್ನು ಸೇರಿಕೊಂಡರು. ಅಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಉತ್ತರ ಪ್ರದೇಶದ ಕಿರಿಯರ ತಂಡವನ್ನು ಸೇರಿಕೊಂಡರು. ಅಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ 16ನೇ ವಯಸ್ಸಿಗೆ ಉತ್ತರ ಪ್ರದೇಶ ಲಿಸ್ಟ್​ ಎ ತಂಡಕ್ಕೆ ಪ್ರವೇಶ ಪಡದುಕೊಂಡರು. 2016ರಲ್ಲಿ ಉತ್ತರ ಪ್ರದೇಶ ಪ್ರಥಮ ದರ್ಜೆ ಕ್ರಿಕೆಟ್​ ತಂಡಕ್ಕೆ ಪ್ರವೇಶ ಪಡೆದುಕೊಂಡಿದ್ದರು.

ಐಪಿಎಲ್​ನಲ್ಲಿ ಅವಕಾಶ

ದೇಶಿಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಸಾಧನೆ ತೋರಿದ ರಿಂಕು ಸಿಂಗ್ ಅವರಿಗೆ 2017ರಲ್ಲಿ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿತು. 10 ಲಕ್ಷ ರೂಪಾಯಿ ಮೂಲ ಬೆಲೆಗೆ ಪಂಜಾಬ್​ ಕಿಂಗ್ಸ್ ತಂಡ ಸೇರಿಕೊಂಡರು. ಮೂರು ವರ್ಷಗಳ ಬಳಿಕ ಅವರ ಅದೃಷ್ಟ ಖುಲಾಯಿಸಿತು. ಕೋಲ್ಕೊತಾ ನೈಟ್​ ರೈಡರ್ಸ್​ ತಂಡ 80 ಲಕ್ಷ ರೂಪಾಯಿ ನೀಡಿ ಅವರನ್ನು ತಂಡಕ್ಕೆ ಖರೀದಿಸಿತು. ಅಲ್ಲಿಂದ ಅವರು ಕೆಕೆಆರ್​ ಭಾಗವಾಗಿದ್ದಾರೆ. ಈ ತಂಡದ ಹಲವಾರು ಗೆಲುವುಗಳಿಗೆ ತಮ್ಮ ಕೊಡುಗೆ ಕೊಟ್ಟಿದ್ದಾರೆ. 2022ರ ಬಳಿಕ ಅವರ ಕೆಕೆಆರ್ ಬಳಗದ ಪ್ರಮುಖ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ : Highest Chase in IPL Records: ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ 200 ಹಾಗೂ ಅದಕ್ಕಿಂತ ಹೆಚ್ಚು ರನ್​ಗಳನ್ನು ಚೇಸ್​ ಮಾಡಿದ ತಂಡಗಳು

ಬಿಸಿಸಿಐ ಬ್ಯಾನ್​ ಮಾಡಿತ್ತು

ಯುವ ಬ್ಯಾಟ್ಸ್​ಮನ್​ ಮೇಲೆ ಬಿಸಿಸಿಐ ಒಂದು ಬಾರಿ ನಿಷೇಧ ಶಿಕ್ಷೆಯನ್ನೂ ಹೇರಿತ್ತು. ಬಿಸಿಸಿಐ ನಿಯಮದ ಪ್ರಕಾರ ತನ್ನ ಜತೆ ಗುತ್ತಿಗೆ ಪಡೆದುಕೊಂಡ ಆಟಗಾರರು ವಿದೇಶಿ ಟೂರ್ನಿಗಳಲ್ಲಿ ಆಡುವಂತಿಲ್ಲ. ರಿಂಕು ಸಿಂಗ್ ಈ ನಿಯಮ ಮುರಿದಿದ್ದರು. ಹೀಗಾಗಿ ಅವರು ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ನಿಷೇಧ ಮುಗಿಸಿದ ಬಳಿಕ ಅವರು ಕ್ರಿಕೆಟ್​ನಲ್ಲಿ ದೊಡ್ಡ ಸಾಧನೆ ಮಾಡುವ ಪಣತೊಟ್ಟು ಉತ್ತಮವಾಗಿ ಆಡಲು ಆರಂಭಿಸಿದರು.

ಊಟವೇ ಬಿಟ್ಟಿದ್ದ ತಂದೆ

ಕ್ರಿಕೆಟ್​ ಮತ್ತು ಗಾಯದ ಸಮಸ್ಯೆಗೆ ಅವಿನಾಭಾವ ನಂಟು. ಅಂತೆಯೆ ರಿಂಕು ಸಿಂಗ್ ಒಂದು ಬಾರಿ ಗಾಯದ ಸಮಸ್ಯೆಗೆ ಒಳಗಗಾಗಿದ್ದರು. ಆ ವೇಳೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿರಲಿಲ್ಲ. ಪುತ್ರ ಗಾಯಗೊಂಡಿರುವ ವಿಚಾರ ತಿಳಿದು ಬೇಸರಗೊಂಡ ಅವರ ತಂದೆ ಮೂರು ದಿನ ಊಟವೇ ಬಿಟ್ಟಿದ್ದರಂತೆ. ಕುಟುಂಬದ ಆದಾಯದ ಮೂಲಕ ಇಲ್ಲವಾಯಿತು ಎಂದು ಅವರು ಬೇಸರಗೊಂಡಿದ್ದರಂತೆ. ಬಳಿಕ ರಿಂಕು ಸಿಂಗ್ ತಂದೆ ಬಳಿ ಕ್ರಿಕೆಟ್​ನಲ್ಲಿ ಇವೆಲ್ಲವೂ ಮಾಮೂಲಿ ಎಂದು ಮನವರಿಕೆ ಮಾಡಿದ್ದರಂತೆ. ಇದೀಗ ಐಪಿಎಲ್​ ಬಳಿಕ ಅವರ ಸ್ಥಿತಿ ಸುಧಾರಣೆಯಾಗಿದೆ.

Exit mobile version