ರಿಯೊ ಡಿ ಜನೈರೊ (ಬ್ರೆಜಿಲ್): ಫುಟ್ಬಾಲ್ ಲೋಕದ ದೇವರು ಪೀಲೆ(Pele) ಎಂದೇ ಖ್ಯಾತರಾಗಿದ್ದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ (82) ಗುರುವಾರ ರಾತ್ರಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಬ್ರೆಜಿಲ್ ತಂಡವು ಮೂರು ಬಾರಿ ವಿಶ್ವ ಕಪ್ (1958, 1962 ಮತ್ತು 1970) ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿಗ್ಗಜ ಆಟಗಾರನ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
ಗಣ್ಯರ ಸಂತಾಪ
ಅಮೆರಿಕ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ, ಬಿಲ್ ಕ್ಲಿಂಟನ್, ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೊನೆಲ್ ಮೆಸ್ಸಿ, ಮಾಜಿ ಕ್ರಿಕೆಟಿಗರು ಸೇರಿದಂತೆ ವಿಶ್ವದಾದ್ಯಂತ ಗಣ್ಯರು ಪೀಲೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ಪೀಲೆ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಕ್ರೀಡೆಗೆ ಅವರು ಕೊಟ್ಟ ಕೊಡುಗೆ ಎಂದಿಗೂ ಶಾಶ್ವತ” ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಜೋ ಬೈಡನ್ ಅವರು, “ಜಗತ್ತನ್ನು ಇನ್ನಿಲ್ಲದಂತೆ ಒಗ್ಗೂಡಿಸಿದ ಕ್ರೀಡೆಯಲ್ಲಿ ಪೀಲೆ ಸಾಧಾರಣವಾಗಿ ಆರಂಭಿಸಿ ದಂತಕಥೆಯಾಗಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
“ಪೀಲೆ ಅವರು ಕೇವಲ ಫುಟ್ಬಾಲ್ ದಂತಕಥೆ ಮಾತ್ರವಲ್ಲ. ಮಾನವೀಯ ಮತ್ತು ಜಾಗತಿಕ ಐಕಾನ್ ವ್ಯಕ್ತಿಯಾಗಿದ್ದರು” ಎಂದು ಬಿಲ್ ಕ್ಲಿಂಟನ್ ಸ್ಮರಿಸಿದ್ದಾರೆ.
ಫುಟ್ಬಾಲ್ನ ಚಿರಸ್ಥಾಯಿ ಕಿಂಗ್ ಪೀಲೆಗೆ ಕೇವಲ ವಿದಾಯ ಸಾಲದು. ನಿನ್ನೆ, ಇಂದು ಮತ್ತು ಎಂದೆಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದೀರಿ. ಅವರನ್ನು ಎಂದಿಗೂ ಮರೆಯಲಾಗದು. ಅವರ ಸ್ಮರಣೆಯು ಫುಟ್ಬಾಲ್ ಪ್ರೇಮಿಗಳಲ್ಲಿ ಶಾಶ್ವತವಾಗಿ ಉಳಿಯಲಿದೆ” ಎಂದು ಪೋರ್ಚುಗಲ್ ತಂಡದ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
ಕತಾರ್ ಫಿಫಾ ವಿಶ್ವ ಕಪ್ ವಿಜೇತ ಅರ್ಜೆಂಟೀನಾ ತಂಡದ ಲಿಯೋನೆಲ್ ಮೆಸ್ಸಿ ಅವರು ಪೀಲೆ ಜತೆಗಿನ ಫೋಟೊವನ್ನು ಹಂಚಿಕೊಂಡು, “ಪೀಲೆ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸ್ಮರಿಸಿದ್ದಾರೆ.
“ಪೀಲೆ ಮೈದಾನದಲ್ಲಿನ ಜಾದೂಗಾರ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಧೈರ್ಯ ತುಂಬುವ ಶಕ್ತಿಯನ್ನು ಆ ದೇವರು ಕರುಣಿಸಲಿ” ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು, ಒಂದು ಯುಗಾಂತ್ಯವಾಗಿದೆ. ಪೀಲೆ ಅವರ ಶ್ರೇಷ್ಠ ಪರಂಪರೆಯನ್ನು ಮುಂದಿನ ತಲೆಮಾರುಗಳು ಮುಂದುವರಿಸಲಿವೆ ಎಂದು ಹೇಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
1957ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಪೆಲೆ, 1977ರಲ್ಲಿ ನಿವೃತ್ತರಾಗಿದ್ದರು. ಫಾರ್ವರ್ಡ್ ಮತ್ತು ಅಟ್ಯಾಕಿಂಗ್ ಮಿಡ್‌ಫೀಲ್ಡರ್ ಆಗಿದ್ದ ಅವರು, ವೃತ್ತಿಜೀವನದಲ್ಲಿ 1000ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದರು. 1995-1998ರ ಅವಧಿಯಲ್ಲಿ ಬ್ರೆಜಿಲ್‌ನ ಕ್ರೀಡಾ ಸಚಿವರೂ ಆಗಿದ್ದರು.
ಇದನ್ನೂ ಓದಿ | RIP Pele | ಕಾಲ್ಚೆಂಡು ಕ್ರೀಡಾಂಗಣದ ಮಹಾರಾಜ ಪೀಲೆಯ ಬದುಕಿನ ಕೊನೇ ಕ್ಷಣಗಳು ಹೀಗಿದ್ದವು