Site icon Vistara News

IND vs ENG ODI | ಭಾರತಕ್ಕೆ ಐದು ವಿಕೆಟ್‌ ಭರ್ಜರಿ ಜಯ, 2-1 ಅಂತರದಲ್ಲಿ ಸರಣಿ ಕೈವಶ

IND vs ENG ODI

ಮ್ಯಾಂಚೆಸ್ಟರ್‌: ರಿಷಭ್‌ ಪಂತ್‌ ( ಅಜೇಯ ೧೨೫ ರನ್‌) ಅವರ ಸ್ಫೋಟಕ ಶತಕದ ನೆರವು ಪಡೆದ ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ (IND VS ENG ODI) ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ೫ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಸರಣಿಯನ್ನು ೨-೧ ಅಂತರದಿಂದ ರೋಹಿತ್‌ ಶರ್ಮ ಬಳಗ ಕೈ ವಶ ಮಾಡಿಕೊಂಡಿತು.

ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಇಂಗ್ಲೆಂಡ್‌ ತಂಡ ೪೫.೫ ಓವರ್‌ಗಳಲ್ಲಿ ೨೫೯ ರನ್‌ಗಳಿಗೆ ಆಲ್‌ಔಟ್‌ ಆಯಿತು. ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭಿಕರ ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ೪೨.೧ ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೨೬೧ ರನ್‌ ಬಾರಿಸಿ ಜಯ ಶಾಲಿಯಾಯಿತು. ಶತಕ ವೀರ ರಿಷಭ್‌ ಪಂತ್‌ ಹಾಗೂ ಅರ್ಧ ಶತಕ ಬಾರಿಸಿದ ಹಾರ್ದಿಕ್‌ ಪಾಂಡ್ಯ (೭೧) ಗೆಲುವಿನ ರೂವಾರಿಗಳೆನಿಸಿಕೊಂಡರು.

ಮತ್ತೆ ಆರಂಭಿಕರ ವೈಫಲ್ಯ

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಮತ್ತೆ ಬ್ಯಾಟಿಂಗ್‌ ವೈಫಲ್ಯ ಎದುರಿಸಿದರು. ನಾಯಕ ರೋಹಿತ್‌ ಶರ್ಮ (೧೭), ಶಿಖರ್‌ ಧವನ್‌ (೧), ವಿರಾಟ್‌ ಕೊಹ್ಲಿ (೧೭) ಮತ್ತೆ ಕನಿಷ್ಠ ಮೊತ್ತಗಳಿಗೆ ವಿಕೆಟ್‌ ಒಪ್ಪಿಸಿದರು. ಸೂರ್ಯ ಕುಮಾರ್‌ ಯಾದವ್‌ (೧೬) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ಆ ಬಳಿಕ ಜತೆಯಾದ ಹಾರ್ದಿಕ್‌ ಪಾಂಡ್ಯ ಹಾಗೂ ರಿಷಭ್‌ ಪಂತ್‌ ೩೮ ರನ್‌ಗಳಿಗೆ ೩ ವಿಕೆಟ್‌ ನಷ್ಟ ಮಾಡಿಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಕಾಪಾಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 133 ರನ್‌ಗಳ ಜತೆಯಾಟ ನೀಡುವ ಮೂಲಕ ಗೆಲವಿನ ಆಶಯ ಮೂಡಿಸಿತು. ಆದಾಗ್ಯೂ ಅರ್ಧ ಶತಕ ಬಾರಿಸಿದ ಪಾಂಡ್ಯ ಔಟಾಗುವ ಮೂಲಕ ಮತ್ತೆ ಭಾರತ ಪಾಳಯದಲ್ಲಿ ಆತಂಕ ಮೂಡಿತು. ಈ ವೇಳೆ ಅಬ್ಬರಿಸಲು ಆರಂಭಿಸಿದ ಪಾಂಡ್ಯ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿ ತಮ್ಮ ಚೊಚ್ಚಲ ಏಕದಿನ ಶತಕ ಬಾರಿಸುವ ಜತೆಗೆ ೧೧೩ ಎಸೆತಗಳಲ್ಲಿ ೧೨೫ ರನ್‌ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಬೌಲಿಂಗ್‌ ಅಬ್ಬರ

ಅದಕ್ಕಿಂತ ಮೊದಲು ಭಾರತ ತಂಡದ ಬೌಲಿಂಗ್‌ನಲ್ಲೂ ಅಬ್ಬರಿಸಿತು. ಮೊಹಮ್ಮದ್‌ ಸಿರಾಜ್‌ (೬೬ ರನ್‌ಗಳಿಗೆ ೨ ವಿಕೆಟ್‌) ತಮ್ಮ ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಪಡೆಯುವ ಮೂಲಕ ಆತಿಥೇಯರಿಗೆ ನಡುಕ ಹುಟ್ಟಿಸಿದರು. ಹಾರ್ದಿಕ್‌ ಪಾಂಡ್ಯ (೨೪ಕ್ಕೆ ೪ ವಿಕೆಟ್‌) ತಮ್ಮ ಜೀವನ ಶ್ರೇಷ್ಠ ಪ್ರದರ್ಶನ ನೀಡಿದರೆ, ಸ್ಪಿನ್ನರ್‌ ಯಜ್ವೇಂದ್ರ ಚಹಲ್‌ ೬೦ ರನ್‌ ವೆಚ್ಚದಲ್ಲಿ ೩ ವಿಕೆಟ್‌ ಕಬಳಿಸಿದರು. ಜಡೇಜಾ ಒಂದು ವಿಕೆಟ್‌ ಉರುಳಿಸಿದರು. ಇಂಗ್ಲೆಂಡ್‌ ಪರ ನಾಯಕ ಜೋಸ್‌ ಬಟ್ಲರ್‌ (೬೦) ಏಕೈಕ ಅರ್ಧ ಶತಕ ಬಾರಿಸಿದರು. ಜೇಸನ್‌ ರಾಯ್‌ (೪೧) ಮೊಯೀನ್‌ ಅಲಿ (೩೪), ಕ್ರೇಗ್‌ ಓವರ್ಟನ್‌ (೩೨) ಸಾಧಾರಣ ಮೊತ್ತ ಪೇರಿಸಲು ನೆರವಾದರು.

ಸ್ಕೋರ್‌ ವಿವರ

ಇಂಗ್ಲೆಂಡ್‌: ೪೫.೫ ಓವರ್‌ಗಳಲ್ಲಿ ೨೫೯ ( ಜೋಸ್‌ ಬಟ್ಲರ್‌ ೬೦, ಜೇಸನ್‌ ರಾಯ್‌ ೪೧, ಮೊಯೀನ್‌ ಅಲಿ ೩೪, ಕ್ರೇಗ್‌ ಓವರ್ಟನ್‌ ೩೨; ಹಾರ್ದಿಕ್‌ ಪಾಂಡ್ಯ ೨೪ಕ್ಕೆ ೪, ಯಜ್ವೆಂದ್ರ ಚಹಲ್‌ ೬೦ಕ್ಕೆ೩, ಮೊಹಮ್ಮದ್‌ ಸಿರಾಜ್‌ ೬೬ಕ್ಕೆ೨).

ಭಾರತ: ೪೨.೧ ಓವರ್‌ಗಳಲ್ಲಿ ೨೬೧ (ರಿಷಭ್‌ ಪಂತ್‌ ೧೨೫*, ಹಾರ್ದಿಕ್‌ ಪಾಂಡ್ಯ ೭೧, ರೀಸ್‌ ಟೋಪ್ಲಿ ೩೫ಕ್ಕೆ೩ )

ಇದನ್ನೂ ಓದಿ: ODI Cricket | ಬೌಲಿಂಗ್‌ನಲ್ಲಿ ಅಬ್ಬರಿಸಿದ ಪಾಂಡ್ಯ, ಅವರ ಸ್ಪೆಲ್‌ಗೆ ಉರುಳಿದ ವಿಕೆಟ್‌ಗಳೆಷ್ಟು?

Exit mobile version