ಮುಂಬಯಿ: ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಕಾರು ಅವಘಡದ ಬಳಿಕ ಮೊದಲ ಬಾರಿಗೆ ತಮ್ಮ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಅವರು ಸುಧಾರಣೆಯ ಹಾದಿಯಲ್ಲಿದ್ದು ಊರುಗೋಲು ಸಹಾಯದಿಂದ ನಡೆಯುವ ಫೋಟೊವನ್ನು ಅವರು ಶೇರ್ ಮಾಡಿದ್ದಾರೆ.
One step forward, One step stronger, One step better (ಒಂದು ಹೆಜ್ಜೆ ಮುಂದಕ್ಕೆ, ಒಂದು ಬಲವಾದ ಹೆಜ್ಜೆ, ಒಂದು ಉತ್ತಮ ಹೆಜ್ಜೆ) ಎಂದು ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮೂಲಕ ಅವರು ಅಪಘಾತದ ಗಾಯಗಳಿಂದ ಸುಧಾರಿಸಿಕೊಳ್ಳುತ್ತಿರುವುದಾಗಿ ತಮ್ಮ ಹಿತೈಷಿಗಳಿಗೆ ಮಾಹಿತಿ ನೀಡಿದ್ದಾರೆ.
ಚಿತ್ರದಲ್ಲಿ ರಿಷಭ್ ಪಂತ್ ಅವರ ಬಲಗಾಲಿನ ಮಂಡಿಯಿಂದ ಹಿಡಿದು ಮೊಣಕಾಲಿನ ತನಕ ಬ್ಯಾಂಡೇಜ್ ಹಾಕಲಾಗಿದೆ. ಬ್ಯಾಂಡೇಜ್ ಬಿಗಿತಕ್ಕೆ ಪಾದದಲ್ಲಿ ಊತ ಕಾಣಿಸಿಕೊಂಡಿದೆ. ಕೈಗೂ ಬ್ಯಾಂಡೇಜ್ ಹಾಕಲಾಗಿದೆ. ಈ ಚಿತ್ರ ಸಂಜೆಯ ಹೊತ್ತಲ್ಲಿ ರಿಷಭ್ ಪಂತ್ ವಾಕಿಂಗ್ ಮಾಡುತ್ತಿರುವ ಸಂದರ್ಭದ್ದು ಎನ್ನಲಾಗಿದೆ.
ಪಂತ್ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಕ್ರಿಗೆಟಿಗ ಸೂರ್ಯಕುಮಾರ್ ಯಾದವ್, ಮಾಡೆಲ್ ಇಶಾ ನೇಗಿ, ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಯಜ್ವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಸೇರಿದಂತೆ ಹಲವರು ಶುಭಾಶಯ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Rishabh Pant In Border-Gavaskar Trophy: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ರಿಷಭ್ ಪಂತ್ ಸಾಧನೆಗಳು
ಡಿಸೆಂಬರ್ನಲ್ಲಿ ರಿಷಭ್ ಪಂತ್ ಅವರು ಚಲಾಯಿಸುತ್ತಿದ್ದ ಕಾರಣ ರಸ್ತೆ ಡಿವೈಡರ್ಗೆ ಗುದ್ದಿ ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ರಿಷಭ್ ಪಂತ್ ಪವಾಡಸದೃಶ ಪಾರಾಗಿದ್ದರು. ಬೆನ್ನಿಗೆ ಸುಟ್ಟ ಗಾಯಗಳಾಗುವ ಜತೆಗೆ ಅವರು ಮಂಡಿಗೂ ಏಟಾಗಿತ್ತು. ಆರಂಭದಲ್ಲಿ ಡೆಹ್ರಾಡೂನ್ನಲ್ಲಿ ಚಿಕಿತ್ಸೆ ಪಡೆದ ಅವರು ಬಳಿಕ ಮುಂಬಯಿಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.