ದುಬೈ: ಕಳೆದ ವರ್ಷ ಡಿಸೆಂಬರ್ನಲ್ಲಿ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಭೀಕರ ಕಾರು ಅವಘಡಕ್ಕೆ ಸಿಲುಕಿ ಪಾರಾಗಿದ್ದ ಕ್ರಿಕೆಟಿಗ ರಿಷಭ್ ಪಂತ್(Rishabh Pant) ಬಹತೇಕ ಚೇತರಿಕೆ ಕಂಡು ಮುಂದಿನ ವರ್ಷ ಕ್ರಿಕೆಟ್ಗೆ ಮರಳುವ ಹಂತದಲ್ಲಿದ್ದಾರೆ. ಇದೀಗ ಮಹೇಂದ್ರ ಸಿಂಗ್ ಧೋನಿ(MS Dhoni) ಪರಿವಾರದೊಂದಿಗೆ ದುಬೈನಲ್ಲಿ ಕ್ರಿಸ್ಮಸ್ ಆಚರಿಸಿದ(Rishabh Pant celebrates Christmas) ಫೋಟೊ ವೈರಲ್ ಆಗಿದೆ. ಈ ಫೋಟೊವನ್ನು ಧೋನಿ ಮಗಳು ಝಿವಾ ಸಿಂಗ್(Ziva Dhoni) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂದಿನ ಅಪಘಾತ ನೆನೆದ ಅಭಿಮಾನಿಗಳು
ಕಳೆದ ವರ್ಷ ಧೋನಿ ಪರಿವಾರದೊಂದಿಗೆ ರಿಷಭ್ ಪಂತ್ ದುಬೈಯಲ್ಲಿ ಕ್ರಿಸ್ಮಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಪಾರ್ಟಿ ಮುಗಿಸಿ ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ಪಂತ್ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು.
ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯದೊಂದಿಗೆ ರಿಷಭ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಗಿತ್ತು. ಇದೀಗ ಈ ವರ್ಷವೂ ಕೂಡ ಪಂತ್ ಅವರು ಧೋನಿ ಪರಿವಾರದೊಂದಿಗೆ ದುಬೈಯಲ್ಲಿ ಕ್ರಿಸ್ಮಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಪೋಟೊ ಕಂಡ ಅವರ ಅಭಿಮಾನಿಗಳು ಅಂದಿನ ಘಟನೆಯನ್ನೊಮ್ಮೆ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ MS Dhoni: ಐಪಿಎಲ್ ನಿವೃತ್ತಿ ಬಳಿಕ ಈ ಕೆಲಸ ಮಾಡಲಿದ್ದಾರೆ ಮಹೇಂದ್ರ ಸಿಂಗ್ ಧೋನಿ
ಧೋನಿ ಮನೆಯ ಎಲ್ಲ ಸಮಾರಂಭದಲ್ಲೂ ಕಾಣಿಸುತ್ತಾರೆ ಪಂತ್
ಮಹೇಂದ್ರ ಸಿಂಗ್ ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್ ಪಂತ್ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್ಗೆ ಸಲಹೆ ನೀಡುತ್ತಾರೆ. ಪಂತ್ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ವರ್ಷದ ದೀಪಾವಳಿ ಹಬ್ಬವನ್ನು ಪಂತ್ ಧೋನಿ ಮನೆಯಲ್ಲಿ ಆಚರಿಸಿದ್ದರು.
ಐಪಿಎಲ್ ಮೂಲಕ ಕಮ್ಬ್ಯಾಕ್
ರಿಷಭ್ ಪಂತ್ ಪಂತ್ ಅವರು 2024ರ ಐಪಿಎಲ್ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಖಚಿತ ಎಂದು ಈಗಾಗಕೇ ಡೆಲ್ಲಿ ಕ್ಯಾಪಿಟಲ್ಸ್ ದೃಢಪಡಿಸಿದೆ. “ಸುಮಾರು ಒಂದು ವರ್ಷದಿಂದ ಕ್ರಿಕೆಟ್ ಕ್ಷೇತ್ರದಿಂದ ಹೊರಗುಳಿದಿರುವ ಭಾರತೀಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ 2024ರ ಐಪಿಎಲ್ ಋತುವಿನಲ್ಲಿ ಆಡುವ ಜತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ಮ್ಯಾನೇಜ್‌ಮೆಂಟ್ ಖಚಿತಪಡಿಸಿತ್ತು. ಈ ಸುದ್ದಿ ಕೇಳಿ ಪಂತ್ ಅವರ ಅಭಿಮಾನಿಗಳು ಸಂತಸಗೊಂಡಿದ್ದರು.
ಇದನ್ನೂ ಓದಿ IND vs SA: ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಹರಿಣ ಪಡೆಗೆ ಸೋಲಿನ ಪಂಚ್ ನೀಡೀತೇ ಭಾರತ?
ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳ ಬೇಕಾದರ ದೇಶೀಯ ಕ್ರಿಕೆಟ್ನಲ್ಲಿ ಆಡಿ ತಮ್ಮ ಫಿಟ್ಸೆನ್ ಸಾಬೀತುಪಡಿಸಬೇಕಿದೆ.
ಡಿಸೆಂಬರ್ 19ರಂದು ದುಬೈನಲ್ಲಿ ನಡೆದಿದ್ದ 2024ರ ಐಪಿಎಲ್ ಆಟಗಾರರ ಮಿನಿ ಹರಾಜಿನಲ್ಲಿ ಪಂತ್ ಕೂಡ ಕಾಣಿಸಿಕೊಂಡಿದ್ದರು. ಫ್ರಾಂಚೈಸಿ ಜತೆ ಸೇರಿ ಕೆಲ ಆಟಗಾರರ ಬಿಡ್ಡಿಂಗ್ ಕೂಡ ಮಾಡಿದ್ದರು. ಇದಾದ ಬಳಿಕ ಧೋನಿ ಜತೆ ಟೆನಿಸ್ ಆಡಿದ್ದ ವಿಡಿಯೊ ಕೂಡ ವೈರಲ್ ಆಗಿತ್ತು. ಒಟ್ಟಾರೆಯಾಗಿ ಪಂತ್ ಮುಂದಿನ ವರ್ಷ ಕ್ರಿಕೆಟ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ.