ನವ ದೆಹಲಿ: ಭೀಕರ ಕಾರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿರುವ ರಿಷಭ್ ಪಂತ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅವರು ಸುಧಾರಣೆಯ ಹಂತದಲ್ಲಿದ್ದು ಮೈದಾನಕ್ಕೆ ಇಳಿದು ಆಡಲು ವರ್ಷವೇ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು 2023ನೇ ಆವೃತ್ತಿಯ ಐಪಿಎಲ್ನಲ್ಲಿ ಆಡುವುದಿಲ್ಲ. ರಿಷಭ್ ಪಂತ್ ಅಲಭ್ಯತೆ ಡೆಲ್ಲಿ ತಂಡಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ. ತಂಡದ ನಾಯಕರಾಗಿದ್ದ ಜತೆಗೆ ವಿಕೆಟ್ಕೀಪಿಂಗ್ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದ ಕಾರಣ ಅವರ ಸ್ಥಾನಕ್ಕೆ ಪರ್ಯಾಯ ಆಟಗಾರನನ್ನು ಹುಡುಕುವ ಸಮಸ್ಯೆ ಎದುರಾಗಿದೆ.. ಹರಾಜು ಪ್ರಕ್ರಿಯೆಯಲ್ಲಿ ಡೇವಿಡ್ ವಾರ್ನರ್ ಅವರನ್ನು ತಂಡಕ್ಕೆ ತನ್ನ ತೆಕ್ಕೆಗೆ ತೆಗೆದುಕೊಂಡು ನಾಯಕತ್ವ ಪಟ್ಟ ನೀಡಿದೆ. ಆದರೆ ವಿಕೆಟ್ ಕೀಪಿಂಗ್ಗೆ ಉತ್ತಮ ಆಯ್ಕೆ ಕಷ್ಟ.
ಮಾರ್ಚ್ 24ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಂಪ್ನಲ್ಲಿ ನಡೆದ ಸಭೆಯಲ್ಲಿ ಕೋಚ್ ರಿಕಿ ಪಾಂಟಿಂಗ್ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಅಗತ್ಯವನ್ನು ಸ್ಮರಿಸಿಕೊಂಡಿದ್ದರು. ಇದೇ ವೇಳೆ ಪಂತ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವಂತೆಯೂ ಮನವಿ ಮಾಡಿದ್ದರು. ಅದಕ್ಕಿಂತ ಹೆಚ್ಚಾಗಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಧರಿಸುವ ಜೆರ್ಸಿ ಅಥವಾ ಕ್ಯಾಪ್ನಲ್ಲಿ ರಿಷಭ್ ಪಂತ್ ಜೆರ್ಸಿ ಸಂಖ್ಯೆ 17 ಪ್ರಿಂಟ್ ಮಾಡಲು ಮುಂದಾಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ರಿಷಭ್ ಪಂತ್ಗೆ ವಿಶ್ವಾಸ ತುಂಬಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಿಷಭ್ ಪಂತ್ ಅಲಭ್ಯತೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ಗೆ ನಾಯಕತ್ವ ನೀಡಲಾಗಿದೆ. ಮಿನಿ ಹರಾಜಿನಲ್ಲಿ 6.5 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ತೆಗೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಅವರಿಗೆ ತಂಡವನ್ನು ಮುನ್ನಡೆಸುವ ಹೊಣೆಗಾರಿಕೆ ನೀಡಿದೆ. ಅದೇ ರೀತಿ ಆಲ್ರೌಂಡರ್ ಅಕ್ಷರ್ ಪಟೇಲ್ಗೆ ಉಪನಾಯಕನ ಪಟ್ಟವನ್ನು ಕಟ್ಟಿದೆ.
ಇದನ್ನೂ ಓದಿ : Rishabh Pant: ರಿಷಭ್ ಪಂತ್ ಭೇಟಿಯಾದ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್
ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಸಫಲವಾಗಿಲ್ಲ. ಹೀಗಾಗಿ ವಾರ್ನರ್ ನಾಯಕತ್ವದಲ್ಲಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವುದಕ್ಕೆ ಸಜ್ಜಾಗಿದೆ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ತಂಡವಾಗಿ ಐಪಿಎಲ್ ಮುಗಿಸಿದ್ದ ಕಾರಣ ಪ್ಲೇಆಫ್ ಹಂತಕ್ಕೂ ಹೋಗಿರಲಿಲ್ಲ. ಏಪ್ರಿಲ್ 1ರಂದು ನಡೆಯುವ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಎದುರಾಗಲಿದೆ.
ಸುಧಾರಣೆಯ ಹಾದಿಯಲ್ಲಿ ಪಂತ್
ಡೆಲ್ಲಿಯಿಂದ ಡೆಹ್ರಾಡೂನ್ಗೆ ಹೋಗುವ ಹಾದಿಯಲ್ಲಿ ರಿಷಭ್ ಪಂತ್ ಚಲಾಯಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಪವಾಡಸದೃಶ ರಿಷಭ್ ಪಂತ್ ಪಾರಾಗಿದ್ದರು. ಮೊದಲಿಗೆ ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮಂಡಿಯ ಗಾಯಕ್ಕಾಗಿ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ಎಡಗೈ ಬ್ಯಾಟರ್ ಪ್ರಸ್ತುತ ಮನೆಯಲ್ಲಿಯೇ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಕೆಲವೊಂದು ದಿನಗಳಿಂದ ಅವರು ತಾವು ಊರುಗೋಲಿನ ಸಮೇತ ನಡೆದುಕೊಂಡು ಹೋಗುವ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು.