ಬೆಂಗಳೂರು: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಿಷಭ್ ಪಂತ್ (Rishabh Pant)ಶೀಘ್ರ ಚೇತರಿಕೆ ಕಾಣುವ ಮೂಲಕ ಎಲ್ಲರಿಗೆ ಅಚ್ಚರಿ ಮೂಡಿಸಿದ್ದಾರೆ. ಅವರ ಗಾಯವನ್ನು ಕಂಡ ಅನೇಕರು ಪಂತ್ ಕ್ರಿಕೆಟ್ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಯಾಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಇದೀಗ ಅವರು ಕೀಪಿಂಗ್ ಮತ್ತು ಬೌಲಿಂಗ್ ಅಭ್ಯಾಸವನ್ನು ನಡೆಸಿ ಶೀಘ್ರದಲ್ಲೇ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ. ಅವರ ಈ ಕ್ಷಿಪ್ರ ಪ್ರಗತಿಯ ಚೇತರಿಕೆ ಕಂಡು ಅನೇಕರು ಅಚ್ಚರಿಗೊಳಗಾಗಿದ್ದಾರೆ.
ಸಾಧಿಸುವ ದೃಢ ಛಲವೊಂದಿದ್ದರೆ ಯಾವುದೇ ಕಷ್ಟವನ್ನು ಎದುರಿಸಿ ಮತ್ತೆ ಎದ್ದು ನಿಲ್ಲಬಹುದು ಎಂಬುದಕ್ಕೆ ಪಂತ್ ಅವರ ಈ ಚೇತರಿಕೆಯ ಪರಿಶ್ರಮವೇ ಉತ್ತಮ ನಿದರ್ಶನ. ಕಳೆದ ಡಿಸೆಂಬರ್ 30ರಂದು ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಶಸ್ತ್ರಚಿಕಿತ್ಸೆ ಬಳಿಕ ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು. ಊರುಗೋಲಿನ ಸಹಾಯದಿಂದ ನಡೆದಾಡುತ್ತಿದ್ದ ಅವರು ಹಂತ ಹಂತವಾಗಿ ಚೇತರಿಕೆ ಕಂಡು ವೇಟ್ಲಿಫ್ಟಿಂಗ್ ಮಾಡುವ ತನಕ ಬಂದು ಮುಟ್ಟಿದ್ದರು. ಇದೀಗ ಪ್ಯಾಡ್ ಮತ್ತು ಗ್ಲೌಸ್ ತೊಟ್ಟು ಕೀಪಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ನಡೆಸಲು ಆರಂಭಿಸಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಪಂತ್ ಅವರ ಚೇತರಿಕೆ ಕಂಡು ಇಂದು ಅಥವಾ ನಾಳೆಯೇ ಪಂತ್ ಕ್ರಿಕೆಟ್ಗೆ ಮರಳುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ Rishabh Pant: ರಿಷಭ್ ಪಂತ್ ಕಮ್ ಬ್ಯಾಕ್ಗೆ ವೇದಿಕೆ ಸಜ್ಜು; ಬಿಸಿಸಿಐ ಉನ್ನತ ಅಧಿಕಾರಿಯಿಂದ ಮಾಹಿತಿ
“ಹೊರಗಿನಿಂದ ಗಾಯ ಒಣಗಿದಂತೆ ಕಂಡರು ಒಳಗಿರುವ ನೋವು ಮಾಸಲು ಹಲವು ದಿನಗಳು ಬೇಕು. ಒಟ್ಟಾರೆ ಪಂತ್ ಈ ವರ್ಷದ ಕೊನೆಯಲ್ಲಿ ತಂಡ ಸೇರುವುದಂತು ಪಕ್ಕಾ ಎನ್ನುವಂತಿದೆ. ಹಾಗಂತ, ಯಾವುದನ್ನೂ ಅವಸರದಲ್ಲಿ ಮಾಡಲು ಸಾಧ್ಯವಿಲ್ಲ” ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.