ನವದೆಹಲಿ: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್(Rishabh Pant) ಆಸ್ಟ್ರೇಲಿಯಾ ವಿರುದ್ಧ ಮುಂಬರುವ 4 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ(ಡಿಸೆಂಬರ್ 30) ಉತ್ತರಾಖಂಡದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪಂತ್ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದರು. ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಆವರಿಸುವ ಮುನ್ನವೇ ಹೊರಬಂದ ಕಾರಣ ಪಂತ್ ಬದುಕುಳಿದಿದ್ದರು.
ಸದ್ಯ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್ ಸಂಪೂರ್ಣವಾಗಿ ಗುಣಮುಖರಾಗಲು ಕನಿಷ್ಠ 3 ರಿಂದ 6 ತಿಂಗಳು ಸಮಯ ಅಗತ್ಯವಿದೆ ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ.
ಪಂತ್ಗೆ ಪ್ಲಾಸ್ಟಿಕ್ ಸರ್ಜರಿ ಆಗಿದೆ. ಲಿಗಮೆಂಟ್ ಇಂಜುರಿಯಿಂದ ಸಂಪೂರ್ಣವಾಗಿ ಗುಣಮುಖರಾಗಲು ಅವರಿಗೆ ಕನಿಷ್ಠ 3 ರಿಂದ 6 ತಿಂಗಳು ಸಮಯಾವಕಾಶದ ಅಗತ್ಯವಿದೆ. ಆದ್ದರಿಂದ ಅವರು ಸ್ವಲ್ಪ ಸಮಯದವರೆಗೆ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಒಂದು ವೇಳೆ ರಿಷಭ್ ಪಂತ್ ಚೇತರಿಕೆಗೆ 3 ರಿಂದ 6 ತಿಂಗಳ ಸಮಯ ತೆಗೆದುಕೊಂಡರೆ, ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 2023ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬೀಳಲಿದ್ದಾರೆ. ಇದೀಗ ಪಂತ್ ಸ್ಥಾನಕ್ಕೆ ಟೀಮ್ ಇಂಡಿಯಾ ನೂತನ ವಿಕೆಟ್ ಕೀಪರ್ ಹುಡುಕಾಟ ನಡೆಸಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಶ್ರೀಕರ್ ಭರತ್ಗೆ ವಿಕಿಟ್ ಕೀಪಿಂಗ್ ಹೊಣೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Rishabh Pant | ಚೇತರಿಕೆ ಕಾಣುತ್ತಿರುವ ಪಂತ್ ಭೇಟಿಯಾಗಲು ಆಸ್ಪತ್ರೆಗೆ ಬರಬೇಡಿ; ಶ್ಯಾಮ್ ಶರ್ಮಾ ಮನವಿ