ಬೆಂಗಳೂರು: ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಟೀಮ್ ಇಂಡಿಯಾದ ಆಟಗಾರ ರಿಷಭ್ ಪಂತ್(Rishabh Pant) ಅವರು ಶೀಘ್ರದಲ್ಲೇ ಕ್ರಿಕೆಟ್ಗೆ ಮರಳುವ ಸೂಚನೆಯೊಂದು ಲಭ್ಯವಾಗಿದೆ. ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಂತ್ ಮೈದಾನಕ್ಕಿಳಿದು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಈ ಮೂಲಕ ತಮ್ಮ ಪುನರಾಗಮನದ ಸುಳಿವು ನೀಡಿದ್ದಾರೆ.
ಬುಧವಾರ ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಪಂತ್ ಬ್ಯಾಟಿಂಗ್ ನಡೆಸಿದ್ದಾರೆ. ಅವರು ಬ್ಯಾಟಿಂಗ್ ನಡೆಸಲು ಮೈದಾನಕ್ಕೆ ಬರುವ ವೇಳೆ ಪಂದ್ಯ ನೋಡಲು ಬಂದ ಪ್ರೇಕ್ಷಕರು ಪಂತ್ ಹೆಸರನ್ನು ಜೋರಾಗಿ ಕೂಗುವ ಮೂಲಕ ಸಂಭ್ರಮಿಸಿದ್ದಾರೆ. ಅಚ್ಚರಿ ಎಂದರೆ ಪಂತ್ ಈ ಪಂದ್ಯದಲ್ಲಿ ತಮ್ಮ ಹಿಂದಿನ ಬ್ಯಾಟಿಂಗ್ ಶೈಲಿಯಲ್ಲಿಯೇ ಬೌಂಡರಿ ಕೂಡ ಬಾರಿಸಿದರು.
ವಿಶ್ವಕಪ್ ಆಡುವ ಸಾಧ್ಯತೆ
ಪಂತ್ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್ ಕ್ರಿಕೆಟ್ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಯಾಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಇದೀಗ ಅವರು ಕೀಪಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸವನ್ನು ನಡೆಸಿ ಶೀಘ್ರದಲ್ಲೇ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ. ಅವರ ಈ ಕ್ಷಿಪ್ರ ಪ್ರಗತಿಯ ಚೇತರಿಕೆ(rishabh pant recovery) ಕಂಡು ಅನೇಕರು ಅಚ್ಚರಿಗೊಳಗಾಗಿದ್ದಾರೆ. ಇನ್ನು ಕೆಲವರು ಅಕ್ಟೋಬರ್ನಲ್ಲಿ ನಡೆಯುವ ವಿಶ್ವಕಪ್ನಲ್ಲಿ(icc world cup 2023) ಆಡುವ ಸಾಧ್ಯತೆ ಇದೆ ಎಂದು ಹೇಳಲಾರಂಭಿಸಿದ್ದಾರೆ.
ಡಿವೈಡರ್ಗೆ ಡಿಕ್ಕಿ ಹೊಡೆದಿದ್ದ ಕಾರು
ಸಾಧಿಸುವ ದೃಢ ಛಲವೊಂದಿದ್ದರೆ ಯಾವುದೇ ಕಷ್ಟವನ್ನು ಎದುರಿಸಿ ಮತ್ತೆ ಎದ್ದು ನಿಲ್ಲಬಹುದು ಎಂಬುದಕ್ಕೆ ಪಂತ್ ಅವರ ಈ ಚೇತರಿಕೆಯ ಪರಿಶ್ರಮವೇ ಉತ್ತಮ ನಿದರ್ಶನ. ಕಳೆದ ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಇದನ್ನೂ ಓದಿ Rishabh Pant : ಭಾರತೀಯ ಕ್ರಿಕೆಟ್ ತಂಡಕ್ಕೆ ಗುಡ್ ನ್ಯೂಸ್ ಕೊಟ್ಟ ರಿಷಭ್ ಪಂತ್
Rishabh Pant's batting practice, recovery has been excellent.
— Johns. (@CricCrazyJohns) August 16, 2023
– Great news for Indian cricket. pic.twitter.com/KThpdkagDz
ಬೆಂಗಳೂರಿನಲ್ಲಿ ತರಬೇತಿ
ಶಸ್ತ್ರಚಿಕಿತ್ಸೆ ಬಳಿಕ ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು. ಊರುಗೋಲಿನ ಸಹಾಯದಿಂದ ನಡೆದಾಡುತ್ತಿದ್ದ ಅವರು ಹಂತ ಹಂತವಾಗಿ ಚೇತರಿಕೆ ಕಂಡು ವೇಟ್ಲಿಫ್ಟಿಂಗ್ ಮಾಡುವ ತನಕ ಬಂದು ಮುಟ್ಟಿದ್ದರು. ಇದೀಗ ಪ್ಯಾಡ್ ಮತ್ತು ಗ್ಲೌಸ್ ತೊಟ್ಟು ಕೀಪಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ನಡೆಸಲು ಆರಂಭಿಸಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಪಂತ್ ಅವರ ಚೇತರಿಕೆ ಕಂಡು ಇಂದು ಅಥವಾ ನಾಳೆಯೇ ಪಂತ್ ಕ್ರಿಕೆಟ್ಗೆ ಮರಳುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.