ಚೆನ್ನೈ: ಟಿ20 ವಿಶ್ವಕಪ್(T20 World Cup 2024) ಟೂರ್ನಿಯನ್ನಾಡಲು ಟೀಮ್ ಇಂಡಿಯಾದ ಮೊದಲ ಬ್ಯಾಚ್ ಈಗಾಗಲೇ ನ್ಯೂಯಾರ್ಕ್ ತಲುಪಿದೆ. ಆಟಗಾರರು ನ್ಯೂಯಾರ್ಕ್‌ಗೆ ತಲುಪಿದ ವಿಚಾರವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ದ್ವಿತೀಯ ಬ್ಯಾಚ್ ಇಂದು(28) ಪ್ರಯಾಣ ಬೆಳೆಸಲಿದೆ. ಮೇ 26ರಂದು ನಡೆದಿದ್ದ ಐಪಿಎಲ್ ಫೈನಲ್ನಲ್ಲಿ ಕೆಕೆಆರ್ ತಂಡ ಹೈದರಾಬಾದ್ ತಂಡವನ್ನು ಮಣಿಸಿ ಕಪ್ ಗೆದ್ದಿತ್ತು. ಈ ಗೆಲುವಿನ ಬಳಿಕ ರಿಂಕು ಸಿಂಗ್(Rinku Singh) ಅವರಿಗೆ ರಿಷಭ್ ಪಂತ್(Rishabh Pant) ನ್ಯೂಯಾರ್ಕ್ನಿಂದ ವಿಡಿಯೊ ಕಾಲ್(Rishabh Pant Video Calls) ಮಾಡಿ ಅಭಿನಂದಿಸಿದ್ದಾರೆ. ಇದೇ ವೇಳೆ ರಿಂಕು ತಾನು ಮೇ 28ರಂದು ನ್ಯೂಯಾರ್ಕ್‌ಗೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
ವಿಡಿಯೊ ಕಾಲ್ ಮೂಲಕ ರಿಂಕು ಸಿಂಗ್ ಮಾತ್ರವಲ್ಲದೆ ನಿತೇಶ್ ರಾಣಾ ಕೂಡ ಪಂತ್ ಜತೆ ಮಾತನಾಡಿದ್ದಾರೆ. ರಿಂಕು ಅವರು ಟಿ20ಯಲ್ಲಿ ಮೀಸಲು ಆಟಗಾರನಾಗಿ ಅವಕಾಶ ಪಡೆದಿದ್ದಾರೆ. ಭಾರತ ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ತಂಡದ ನಾಯಕ ರೋಹಿತ್, ಶರ್ಮ, ಕೋಚ್ ರಾಹುಲ್ ದ್ರಾವಿಡ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಸೇರಿ ಹಲವು ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗಳು ಶನಿವಾರದಂದು ಮುಂಬೈ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದರು.
ಇದನ್ನೂ ಓದಿ IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಫೈನಲ್ ರಿಸಲ್ಟ್ನಲ್ಲಿದೆ ಸಾಮ್ಯತೆ
ವಿರಾಟ್ ಕೊಹ್ಲಿ ಅವರು ಮೇ 30ಕ್ಕೆ ಏಕಾಂಗಿಯಾಗಿ ನ್ಯೂಯಾರ್ಕ್‌ಗೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ, ಜತೆಗೆ ಜೂನ್ 1ರಂದು ನಡೆಯುವ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಕೊಹ್ಲಿ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. “ಕೊಹ್ಲಿ ಅವರು ತಡವಾಗಿ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ನಮಗೆ ಮೊದಲೇ ತಿಳಿಸಿದ್ದರು. ಇದೇ ಕಾರಣಕ್ಕೆ ಬಿಸಿಸಿಐ ಅವರ ವೀಸಾವನ್ನು ಕಾಯ್ದಿರಿಸಿದೆ. ಅವರು ಮೇ 30 ರ ಮುಂಜಾನೆ ನ್ಯೂಯಾರ್ಕ್‌ಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಅವರ ಮನವಿಗೆ ಬಿಸಿಸಿಐ ಒಪ್ಪಿಗೆ ನೀಡಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಕೊಹ್ಲಿ ಅಲ್ಲದೆ, ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಡವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ದುಬೈನಲ್ಲಿ ವೈಯಕ್ತಿಕ ಕೆಲಸದ ನಿಮಿತ್ತ ತಂಡ ಸೇರಲು ತಡವಾಗಲಿದೆ ಎಂದು ಸಂಜು ಈಗಾಗಲೇ ಬಿಸಿಸಿಐಗೆ ತಿಳಿಸಿರುವ ಕಾರಣ ಬಿಸಿಸಿಐ ಸ್ಯಾಮ್ಸನ್ಗೆ ತಡವಾಗಿ ತಂಡ ಸೇರಲು ಅವಕಾಶ ನೀಡಿದೆ.
ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.