ನವದೆಹಲಿ: ಕಾರು ಅಪಘಾತದಲ್ಲಿ ಪವಾಡ ಸದೃಶ್ಯ ಪಾರಾಗಿ ಸದ್ಯ ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್(Rishabh Pant) ಅವರು ಇದೀಗ ಊರುಗೋಲಿನ ಸಹಾಯವಿಲ್ಲದೆ ನಡೆದಾಡಲು ಆರಂಭಿಸಿದ್ದಾರೆ. ಪಂತ್ ಅವರು ಊರುಗೋಲು ಇಲ್ಲದೆ ನಡೆದಾಡಿದ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ವೀಕ್ಷಿಸಲು ಪಂತ್ ಅವರು ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಊರುಗೋಲು ಸಹಾಯದಿಂದ ಬಂದಿದ್ದರು. ಇದಾದ ಬಳಿಕ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆಯೂ ರಿಷಭ್ ಪಂತ್ ಕಾಣಿಸಿಕೊಂಡಿದ್ದರು. ಇದೀಗ ಅವರು ಊರುಗೋಲಿನ ಸಹಾಯವಿಲ್ಲದೆ ನಡೆದಾಡಲು ಆರಂಭಿಸಿದ್ದಾರೆ.
ರಿಷಭ್ ಪಂತ್ ಅವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಕೆಜಿಎಫ್ ಸಿನಿಮಾದ ಬಿಜಿಎಮ್ಗೆ ಊರುಗೋಲಿನ ಸಹಾಯವಿಲ್ಲದೆ ನಡೆದಾಡಿದ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಯಶ್ ಅವರು ವಾಕ್ ಮಾಡಿದ ರೀತಿಯಲ್ಲೇ ಪಂತ್ ಅವರು ತಮ್ಮ ಕೈಯಲ್ಲಿದ್ದ ಊರುಗೋಲನ್ನು ಎಸೆದು ಅವರ ಶೈಲಿಯಲ್ಲಿಯೇ ನಡೆದಾಡಿದ್ದಾರೆ. ಈ ವಿಡಿಯೊ ಕಂಡ ಅವರ ಅಭಿಮಾನಿಗಳು ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಮೈದಾನದಲ್ಲಿ ನೋಡುವ ಕಾಲ ಸನ್ನಿಹಿತವಾದಂತೆ ತೋರುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದಕ್ಕೂ ಮುನ್ನ “ಒಂದು ಹೆಜ್ಜೆ ಮುಂದಕ್ಕೆ, ಒಂದು ಬಲವಾದ ಹೆಜ್ಜೆ, ಒಂದು ಉತ್ತಮ ಹೆಜ್ಜೆ(One step forward, One step stronger, One step better) ಎಂದು ರಿಷಭ್ ಪಂತ್ ಅವರು ಮೊದಲ ಬಾರಿಗೆ ಊರುಗೋಲಿನ ಸಹಾಯದೊಂದಿಗೆ ನಡೆದಾಡುವ ಫೋಟೊವನ್ನು ಟ್ವೀಟ್ ಮಾಡುವ ಮೂಲಕ ಅಪಘಾತದ ಗಾಯಗಳಿಂದ ಸುಧಾರಿಸಿಕೊಳ್ಳುತ್ತಿರುವುದಾಗಿ ತಮ್ಮ ಹಿತೈಷಿಗಳಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ Rishabh Pant: ಏಷ್ಯಾ ಕಪ್, ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ರಿಷಭ್ ಪಂತ್ ಔಟ್!
2022 ಡಿಸೆಂಬರ್ 30 ರಂದು ಮುಂಜಾನೆ ಪಂತ್ ಅವರು ದಿಲ್ಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಚಲಾಯಿಸುತ್ತಿದ್ದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಆದರೆ ರಿಷಭ್ ಪಂತ್ ಅವರು ಪವಾಡ ಸದೃಶ್ಯ ಪಾರಾಗಿದ್ದರು.