ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಶನಿವಾರ ಐಪಿಎಲ್ 16ನೇ ಅವೃತ್ತಿಯ 20ನೇ ಪಂದ್ಯ ನಡೆಯಲಿದೆ. ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲ್ಲುವ ಉಮೇದಿನೊಂದಿಗೆ ಅಭ್ಯಾಸ ನಡೆಸುತ್ತಿದೆ. ಅಚ್ಚರಿಯೆಂದರೆ ಈ ಟೀಮ್ನೊಂದಿಗೆ ಕಳೆದ ವರ್ಷಾಂತ್ಯದಲ್ಲಿ ಅಪಘಾತಕ್ಕೆ ಒಳಗಾಗಿರುವ ರಿಷಭ್ ಪಂತ್ ಕೂಡ ಕಾಣಿಸಿಕೊಂಡಿದ್ದಾರೆ. ಚೇತರಿಕೆಯ ಹಾದಿಯಲ್ಲಿರುವ ಅವರು ಡೆಲ್ಲಿ ಕ್ಯಾಪಿಟಲ್ಸ್ ಬಳಗಕ್ಕೆ ಚೈತನ್ಯ ತುಂಬಲು ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಹಾಕಿದ್ದಾರೆ.
2022ರ ಡಿಸೆಂಬರ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು. ಹೀಗಾಗಿ ಅವರು ಹಾಲಿ ಆವೃತ್ತಿಯ ಐಪಿಎಲ್ಗೆ ಲಭ್ಯರಿಲ್ಲ. ಆದರೆ, ನವ ದೆಹಲಿಯಲ್ಲಿ ನಡೆದ ಪಂದ್ಯದ ವೇಳೆ ಅವರು ಸ್ಟೇಡಿಯಮ್ನಲ್ಲಿ ಕಾಣಿಸಿಕೊಂಡಿದ್ದರು. ವಾಕಿಂಗ್ ಸ್ಟಿಕ್ ಹಿಡಿದುಕೊಂಡು ನಡೆಯುತ್ತಿರುವ ರಿಷಭ್ ಪಂತ್ ಅವರು ಇದೀಗ ಸೋಲಿನ ಸುಳಿಯಲ್ಲಿ ಸಿಲುಕಿರುವ ಡೆಲ್ಲಿ ತಂಡಕ್ಕೆ ಸಲಹೆ ಕೊಡಲು ಬಂದಿದ್ದಾರೆ.
ರಿಷಭ್ ಪಂತ್ ಬಿಳಿ ಬಣ್ಣದ ಟಿ ಶರ್ಟ್ ಧರಿಸಿಕೊಂಡು ಮೈದಾನದಿಂದ ಹೊರಗಡೆ ನಿಂತುಕೊಂಡು ಡೆಲ್ಲಿ ತಂಡದ ಉಪನಾಯಕ ಅಕ್ಷರ್ ಪಟೇಲ್ ಬ್ಯಾಟ್ ಮಾಡುವುದನ್ನು ವೀಕ್ಷಿಸುತ್ತಿದ್ದಾರೆ. ಹೀಗಾಗಿ ರಿಷಭ್ ಪಂತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದದ ಪಂದ್ಯದ ವೇಳೆಯೂ ಹಾಜರಿರುವ ಸಾಧ್ಯತೆಗಳಿವೆ.
ಡಗೌಟ್ನಲ್ಲಿ ರಿಷಭ್ ಪಂತ್ ಜೆರ್ಸಿ ಹಾಕಿದ ಫೋಟೊ ವೈರಲ್ ಆಗಿತ್ತು
ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾದ ಆಟಗಾರ ರಿಷಭ್ ಪಂತ್(Rishabh Pant) ಈ ಬಾರಿಯ ಐಪಿಎಲ್(IPL 2023) ಟೂರ್ನಿಯಿಂದ ಹೊರಗುಳಿದ ವಿಚಾರ ಎಲ್ಲರಿಗೆ ತಿಳಿದೇ ಇದೆ. ಚೇತರಿಕೆ ಕಾಣುತ್ತಿರುವ ಈ ಯುವ ಆಟಗಾರನಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಅವರ ಜೆರ್ಸಿಯನ್ನು ಡಗ್ ಔಟ್ ಮೇಲೆ ತೂಗು ಹಾಕಿದೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ರಾತ್ರಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ ಪಂತ್ ಅವರ ಜೆರ್ಸಿಯನ್ನು ತಮ್ಮ ಡಗ್ ಔಟ್ ಮೇಲೆ ಹಾಕಿದೆ. ಡೆಲ್ಲಿ ಫ್ರಾಂಚೈಸಿಯ ಈ ನಡೆಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಡೆಲ್ಲಿ ತಂಡದ ನಾಯಕನಾಗಿರುವ ಪಂತ್ ಅವರು ಶೀಘ್ರದಲ್ಲೇ ತೇತರಿಕೆ ಕಂಡು ಮತ್ತೆ ಮುಂದಿನಂತೆ ಅವರು ಕ್ರಿಕೆಟ್ ಕ್ಷೇತ್ರಕ್ಕೆ ಬರುವಂತಾಗಲು ಅವರಿಗೆ ಇದೊಂದು ಸ್ಫೂರ್ತಿಯಾಗಲಿ ಎಂಬ ನಿಟ್ಟಿನಲ್ಲಿ ಈ ರೀತಿ ಪಂತ್ ಅವರ ಜೆರ್ಸಿಯನ್ನು ಡಗ್ ಔಟ್ ಮೇಲೆ ಹಾಕಲಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಜತೆಗೆ ಕೋಚ್ ರಿಕಿ ಪಾಂಟಿಂಗ್ ಕೂಡ ಪಂತ್ ಅನುಪಸ್ಥಿತಿ ಕಾಡುತ್ತಿರುವುದು ಬೇಸರದ ಸಂಗತಿ ಮುಂದಿನ ಸೀಸನ್ನಲ್ಲಿ ಮತ್ತೆ ಅವರ ಜತೆ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ IPL 2023 : ಬೆಂಗಳೂರಿನಲ್ಲಿ ಇಂದು ಐಪಿಎಲ್ ಹಬ್ಬ; ತಡರಾತ್ರಿಯೂ ಇದೆ ಮೆಟ್ರೋ, ಬಸ್ ಓಡಾಟ; ಪಾರ್ಕಿಂಗ್ ಎಲ್ಲೆಲ್ಲಿ?
ಕಳೆದ ವರ್ಷ ಡಿಸೆಂಬರ್ನಲ್ಲಿ ಪಂತ್ ತಮ್ಮ ಮರ್ಸಿಡೀಸ್ ಕಾರನ್ನು ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಇದಾದ ಬಳಿಕ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿದ್ದರು. ಸದ್ಯ ಅವರು ಮನೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.