ಮುಂಬಯಿ: ಭಾರತ ತಂಡದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ (Rishabh Pant) ಭೀಕರ ಕಾರು ಅಪಘಾತಕ್ಕೆ ಸಿಲುಕಿ ಆಸ್ಟತ್ರೆ ಸೇರಿದ ಬಳಿಕ ಮೊದಲ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ಖಾತೆಯ ಮೂಲಕ ಆರೋಗ್ಯ ಸುಧಾರಣೆಯ ಶುಭ ಸಂದೇಶವನ್ನು ಅವರು ಕಳುಹಿಸಿದ್ದಾರೆ.
ನಿಮ್ಮೆಲ್ಲರ ಹಾರೈಕೆ ಹಾಗೂ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ. ನಾನು ಒಳಪಟ್ಟಿರುವ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ. ಈಗಾಗಲೇ ಗುಣಮುಖನಾಗುತ್ತಿದ್ದು, ಮುಂದಿನ ಸವಾಲುಗಳನ್ನು ಸ್ವೀಕರಿಸಲು ಆದಷ್ಟು ಬೇಗ ಸಿದ್ಧಗೊಳ್ಳುವೆ. ಬಿಸಿಸಿಐ ಕಾರ್ಯದರ್ಶಿ ಜಯ್ಶಾ, ಬಿಸಿಸಿಐ ಹಾಗೂ ಸರಕಾರದ ಪ್ರಾಧಿಕಾರಗಳು ನೀಡಿದ ಬೆಂಬಲಕ್ಕೆ ನನ್ನ ಹೃದಯ ತುಂಬಿದ ಧನ್ಯವಾದಗಳು. ನನ್ನ ಬೆಂಬಲಿಗರು, ಸಹ ಆಟಗಾರರು, ವೈದ್ಯರ ತಂಡ ನೀಡಿದ ಬೆಂಬಲ ಹಾಗೂ ಧೈರ್ಯಕ್ಕೆ ಧನ್ಯವಾದಗಳು. ನಿಮ್ಮೆಲ್ಲರನ್ನೂ ಕ್ರಿಕೆಟ್ ಮೈದಾನದಲ್ಲಿ ನೋಡುವಾಸೆ ಎಂದು ರಿಷಭ್ ಪಂತ್ ಅವರು ಟ್ವೀಟ್ ಮಾಡಿದ್ದಾರೆ.
ಇವೆಲ್ಲದ ನಡುವೆ ರಿಷಭ್ ಪಂತ್ ಮುಂದಿನ ಹಲವಾರು ಸ್ಪರ್ಧಾತ್ಮಕ ಟೂರ್ನಿಗಳಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ನೀಡಿರುವ ಪಂತ್ ವೈದ್ಯಕೀಯ ವರದಿ ಪ್ರಕಾರ ಐಪಿಎಲ್, ಮುಂದಿನ ಏಕ ದಿನ ವಿಶ್ವ ಕಪ್ ಸೇರಿದಂತೆ ಎಲ್ಲ ಟೂರ್ನಿಗಳಿಂದ ಅವರು ಹೊರಕ್ಕೆ ಉಳಿಯಲಿದ್ದಾರೆ. ಕ್ರಿಕ್ ಇನ್ಫೋ ಪ್ರಕಾರ ರಿಷಭ್ ಪಂತ್ ಅವರಿಗೆ ಮೊಣಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದೆ. ಇನ್ನು ಮುಂದೆ ಅವರಿಗೆ ಹಣೆ ಹಾಗೂ ಸುಟ್ಟು ಹೋಗಿರುವ ಬೆನ್ನಿಗೆ ಪ್ಲಾಸ್ಟಿಕ್ ಸರ್ಜರಿ ನಡೆಯಬೇಕಾಗಿದೆ. ಅದಕ್ಕಾಗಿ ದೀರ್ಘ ಅವಧಿಯ ತನಕ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ.
ರಿಷಭ್ ಪಂತ್ ಅವರು ಕಳೆದ ತಿಂಗಳು 30ರಂದು ದೆಹಲಿಯಿಂದ ತಮ್ಮೂರು ಉತ್ತರಾಖಂಡದ ರೂರ್ಕಿಗೆ ಹೋಗುವಾಗ ಕಾರು ಅವಘಡಕ್ಕೆ ಒಳಗಾಗಿದ್ದರು. ಅವರು ಚಲಾಯಿಸುತ್ತಿದ್ದ ಬೆಂಜ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಅವರನ್ನು ಬಸ್ ಚಾಲಕರೊಬ್ಬರು ಉಪಚರಿಸಿದ್ದರು. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಡೆಹ್ರಾಡೂನ್ನ ಮ್ಯಾಕ್ಸ್ ಅಸ್ಪತ್ರೆಯಲ್ಲಿ ಆರಂಭಿಕ ಹಂತದ ಚಿಕಿತ್ಸೆ ಪಡೆದಿದ್ದರು. ಅಲ್ಲಿಂದ ಅವರನ್ನು ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರು ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಇದನ್ನೂ ಓದಿ | Rishabh Pant | ಹೊತ್ತಿ ಉರಿಯುತ್ತಿದ್ದ ಕಾರಿನ ಬಳಿಯಿಂದ ರಿಷಭ್ ಪಂತ್ ಪ್ರಾಣ ಉಳಿಸಿದ್ದು ಬಸ್ ಡ್ರೈವರ್!