ಲಂಡನ್: ಟಿ20 ವಿಶ್ವ ಚಾಂಪಿಯನ್(icc t20 world cup) ಇಂಗ್ಲೆಂಡ್ ತಂಡದ ಆಟಗಾರರೊಂದಿಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಕ್ರಿಕೆಟ್ ಆಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಂಡನ್ನ 10 ಡೌನಿಂಗ್ ಸ್ಟ್ರೀಟ್ನಲ್ಲಿ ಕೆಲಕಾಲ ಪ್ರಧಾನಿ ಹಾಗೂ ಆಟಗಾರರು ಕ್ರಿಕೆಟ್ ಆಡುವ ಮೂಲಕ ಎಂಜಾಯ್ ಮಾಡಿದ್ದಾರೆ.
ಟಿ20 ವಿಶ್ವಕಪ್ ವಿಜೇತ ತಂಡ ಇತ್ತೀಚೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ರಿಷಿ ಸುನಕ್ ಅವರು ಕ್ರಿಕೆಟ್ ಆಡಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಎಡಗೈ ಆಲ್ರೌಂಡರ್ ಸ್ಯಾಮ್ ಕರನ್(Sam Curran) ಬೌಲಿಂಗ್ ಎದುರಿಸಿದ ಸುನಕ್ ಉತ್ತಮ ಬ್ಯಾಟಿಂಗ್ ಕೌಶಲ್ಯ ತೋರಿದರು. ಆದರೆ ವೇಗಿ ಕ್ರಿಸ್ ಜೋರ್ಡನ್(Chris Jordan) ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟಾದರು. ಈ ವೇಳೆ ದೇಶದ ಪ್ರಧಾನಿಯನ್ನು ಔಟ್ ಮಾಡಿದ ಸಂಭ್ರದಲ್ಲಿ ಜೋರ್ಡನ್ ಕುಣಿದು ಕುಪ್ಪಳಿಸಿದರು. ಇದನ್ನು ಕಂಡ ಪ್ರಧಾನಿ ಸುನಕ್ ಕೂಡ ನಕ್ಕು ನಲಿದರು.
ಪ್ರಧಾನಿ ಅವರ ಭೇಟಿ ವೇಳೆ ತಂಡದ ನಾಯಕ ಜಾಸ್ ಬಟ್ಲರ್, ಸ್ಯಾಮ್ ಕರನ್ ವೇಗಿ ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಾಲನ್, ಫಿಲ್ ಸಾಲ್ಟ್, ಕ್ರಿಸ್ ವೋಕ್ಸ್ ಸೇರಿದಂತೆ ಕಲೆ ಆಟಗಾರರು ಉಪಸ್ಥಿತರಿದ್ದರು. ಈ ಫೋಟೊವನ್ನು ಜಾಸ್ ಬಟ್ಲರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ Sachin Tendulkar: ಬಿಸಿಸಿಐ ಅಧ್ಯಕ್ಷರಾಗಲಿದ್ದಾರಾ ಸಚಿನ್ ತೆಂಡೂಲ್ಕರ್?
ಆಲ್ರೌಂಡರ್ ಸ್ಯಾಮ್ ಕರನ್ ಕೂಡ ಪ್ರಧಾನಿ ರಿಷಿ ಸುನಕ್ ಜತೆ ಕ್ರಿಕೆಟ್ ಆಡಿದ ವಿಡಿಯೊವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ‘ಇದು ನನ್ನ ಜೀವನದ ಉತ್ತಮ ಕ್ಷಣಗಳಲ್ಲಿ ಒಂದಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಆಟಗಾರರೊಂದಿಗೆ ಕ್ರಿಕೆಟ್ ಆಡಿದ ಫೋಟೊವನ್ನು ಪ್ರಧಾನಿ ರಿಷಿ ಸುನಕ್ ಕೂಡ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ’10 ಡೌನಿಂಗ್ ಸ್ಟ್ರೀಟ್‌ನ ಉದ್ಯಾನದಲ್ಲಿ ಇಂಗ್ಲೆಂಡ್ ತಂಡದೊಂದಿಗೆ ಕ್ರಿಕೆಟ್ ಆಡಿದ್ದು ನಿಜಕ್ಕೂ ರೋಮಾಂಚನವಾಗಿತ್ತು. ತಂಡದ ಈ ಬಾರಿಯ ಏಕದಿನ ವಿಶ್ವ ಕಪ್ನಲ್ಲಿಯೂ ಗೆಲ್ಲುವಂತಾಗಲಿ’ ಎಂದು ಹಾರೈಸಿದರು.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಬಟ್ಲರ್ ಪಡೆ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು.