Site icon Vistara News

Robin Uthappa | ಬಾಲೌಟ್‌, ವಿಕೆಟ್‌ ಬಿಟ್ಟು ಬಂದು ಸಿಕ್ಸರ್‌, ಕ್ಯಾಚ್‌ ಹಿಡಿದು ಸಲಾಂ, ಇವು ಉತ್ತಪ್ಪ ಸಿಗ್ನೇಚರ್‌ ಸ್ಟೈಲ್!

Robin IPL

ಬೆಂಗಳೂರು: ಯಾವುದೇ ಒಬ್ಬ ಕ್ರಿಕೆಟಿಗ ನಿವೃತ್ತಿ ಘೋಷಿಸುತ್ತಲೇ, ಅವರು ಗಳಿಸಿದ ರನ್‌ಗಳು, ಮಾಡಿದ ದಾಖಲೆಗಳು, ತೆಗೆದ ವಿಕೆಟ್‌ಗಳು, ರನ್‌ ಸರಾಸರಿ, ಸ್ಟ್ರೈಕ್‌ರೇಟ್‌ ಸೇರಿ ಹಲವು ದಿಸೆಯಲ್ಲಿ ಕ್ರಿಕೆಟಿಗನ ಸಾಧನೆ ಮೆಲುಕು ಹಾಕಲಾಗುತ್ತದೆ. ಆದರೆ, ಕೆಲವೇ ಕೆಲವು ಕ್ರಿಕೆಟಿಗರು ಮಾತ್ರ ಅಂಕಿ-ಅಂಶಗಳ ದಾಖಲೆಯ ಆಚೆಗೆ ವಿಭಿನ್ನ ಶೈಲಿ, ಹೊಡೆತ, ಕ್ಷೇತ್ರರಕ್ಷಣೆ ಸೇರಿ ವಿವಿಧ ರೀತಿಯಲ್ಲಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಇಂತಹ ವಿಭಿನ್ನ ಆಟಗಾರರ ಸಾಲಿಗೆ ರಾಬಿನ್‌ ಉತ್ತಪ್ಪ (Robin Uthappa) ಅವರೂ ಸೇರುತ್ತಾರೆ.

ಪಾಕ್‌ ವಿರುದ್ಧದ ಪಂದ್ಯದಲ್ಲಿ ಬಾಲೌಟ್‌, ವಿಕೆಟ್‌ ಬಿಟ್ಟು ನಡೆದುಕೊಂಡು ಬಂದೇ ಬಾಲನ್ನು ಬೌಂಡರಿ ಆಚೆಗೆ ಅಟ್ಟುವುದು, ಕ್ಯಾಚ್‌ ಹಿಡಿದ ಬಳಿಕ ಜನರತ್ತ ಬಾಗಿ ನಮಸ್ಕರಿಸುವುದು ಸೇರಿ ಹಲವು ಹೆಗ್ಗುರುತುಗಳನ್ನು ಬಿಟ್ಟ ರಾಬಿನ್‌ ಉತ್ತಪ್ಪ ಈಗ ಭಾರತದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ನೆಪದಲ್ಲಿ ರಾಬಿನ್‌ ಉತ್ತಪ್ಪ ಕ್ರಿಕೆಟ್‌ ಜೀವನದ ಪ್ರಮುಖ ಅಂಶಗಳನ್ನು ಮೆಲುಕು ಹಾಕಲಾಗಿದೆ.

ಮೊದಲ ಪಂದ್ಯದಲ್ಲೇ ಹುಟ್ಟಿಸಿದ ಭರವಸೆ

ಅಂತಾರಾಷ್ಟ್ರೀಯ ಮಟ್ಟದ ಮೊದಲ ಪಂದ್ಯ ಎಂದರೆ ಎಲ್ಲ ಆಟಗಾರರಿಗೂ ಒಂದು ಅಳುಕು, ಆತಂಕ ಇದ್ದೇ ಇರುತ್ತದೆ. ಆದರೆ, ರಾಬಿನ್‌ ಉತ್ತಪ್ಪ ಅವರು ಪದಾರ್ಪಣೆ ಪಂದ್ಯದಲ್ಲಿಯೇ ಭರವಸೆ ಹುಟ್ಟಿಸಿದರು. ೨೦೦೬ರ ಏಪ್ರಿಲ್‌ ೧೫ರಂದು ಇಂದೋರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರಾಬಿನ್‌ ಉತ್ತಪ್ಪ ಪದಾರ್ಪಣೆ ಮಾಡಿದರು. ವೀರೇಂದ್ರ ಸೆಹ್ವಾಗ್‌ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಉತ್ತಪ್ಪ, ಮೊದಲ ಪಂದ್ಯದಲ್ಲಿಯೇ ೮೬ ರನ್‌ ಗಳಿಸಿದರು. ಅಂದು ತುಸು ನಿರ್ಲಕ್ಷ್ಯ ವಹಿಸಿ ರನ್‌ಔಟ್‌ ಆಗದಿದ್ದರೆ ಉತ್ತಪ್ಪ ಶತಕ ಬಾರಿಸುತ್ತಿದ್ದರೋ ಏನೋ?

ಬಾಲೌಟ್‌ ಸಾಧನೆ ಬಳಿಕ ಉತ್ತಪ್ಪ ಸಲಾಂ ಮಾಡುವ ಸಿಗ್ನೇಚರ್‌ ಸ್ಟೈಲ್.

ಪಾಕ್‌ ವಿರುದ್ಧ ಬಾಲೌಟ್‌ ಸಾಧನೆ

೨೦೦೭ರ ಟಿ-೨೦ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಮೊದಲ ಬಾರಿಗೆ ನಡೆದ “ಬಾಲೌಟ್‌” ಪ್ರಯೋಗದಲ್ಲಿ ಭಾರತ ಯಶಸ್ಸು ಕಾಣಲು ಉತ್ತಪ್ಪ ಅವರೂ ಕಾರಣ. ಭಾರತ ತಂಡವು ಸೂಪರ್‌-೮ ಹಂತ ತಲುಪಲು ಪಾಕ್‌ ವಿರುದ್ಧ ಗೆಲ್ಲಲೇಬೇಕಾಗಿತ್ತು. ಆಗ ಪಂದ್ಯವು ಟೈ ಆದಾಗ, ಬಾಲೌಟ್‌ ಎಂಬ ನೂತನ ಪ್ರಯೋಗ ಮಾಡಲಾಗಿತ್ತು. ಈಗಿನಂತೆ ಸೂಪರ್‌ ಓವರ್‌ ಇರದ ಕಾರಣ, ಬ್ಯಾಟ್ಸ್‌ಮನ್‌ ಇಲ್ಲದೆ, ಬೌಲರ್‌ಗಳು ಬೌಲಿಂಗ್‌ ಮಾಡಬೇಕು ಹಾಗೂ ಅದು ವಿಕೆಟ್‌ಗೆ ತಾಗಬೇಕು. ಆಗ ಭಾರತದ ಪರ ವೀರೇಂದ್ರ ಸೆಹ್ವಾಗ್‌, ಹರ್ಭಜನ್‌ ಸಿಂಗ್‌ ಹಾಗೂ ರಾಬಿನ್‌ ಉತ್ತಪ್ಪ ಅವರು ಯಶಸ್ವಿಯಾಗಿ ಬಾಲೌಟ್‌ ಮಾಡುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಬ್ಯಾಟಿಂಗ್‌ನಲ್ಲೂ ಉತ್ತಪ್ಪ ೫೦ ರನ್‌ ಗಳಿಸಿ ಅಮೂಲ್ಯ ಕಾಣಿಕೆ ನೀಡಿದ್ದರು. ಬಾಲೌಟ್‌ ಬಳಿಕ ಅವರು ಜನರತ್ತ ಬಾಗಿ, ನಮನ ಸಲ್ಲಿಸುವುದು ಉತ್ತಪ್ಪ ಅವರ ಸಿಗ್ನೇಚರ್‌ ಸ್ಟೈಲ್‌ ಆಯಿತು. ಕ್ಯಾಚ್‌ ಹಿಡಿದಾಗಲೂ ಉತ್ತಪ್ಪ ಹೀಗೆ ಬಾಗಿ ನಮಿಸುತ್ತಿದ್ದರು. ಎಂಥಾ ಕಾಕತಾಳೀಯ ನೋಡಿ, ಯಾವ ಬಾಲೌಟ್‌ ಮೂಲಕ ಉತ್ತಪ್ಪ ಹೆಸರುವಾಸಿಯಾದರೋ, ಅದೇ ಬಾಲೌಟ್‌ ನಡೆದ ದಿನವಾದ ಸೆಪ್ಟೆಂಬರ್‌ ೧೪ರಂದೇ ಅವರು ನಿವೃತ್ತಿ ಘೋಷಿಸಿದ್ದಾರೆ.

ಏಳು-ಬೀಳಿನ ವೃತ್ತಿ ಜೀವನ

ಆರಂಭಿಕ ಪಂದ್ಯಗಳಲ್ಲಿ ಉತ್ತಮ ಭರವಸೆ ಮೂಡಿಸಿದರೂ, ಅದಾದ ಬಳಿಕ ಹಲವು ಅವಕಾಶಗಳನ್ನು ನೀಡಿದರೂ ರಾಬಿನ್‌ ಉತ್ತಪ್ಪ ಅವರು ರಾಷ್ಟ್ರೀಯ ತಂಡದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿಯೇ ಅವರು ಭಾರತ ತಂಡದ ಪರ ೪೬ ಏಕದಿನ ಹಾಗೂ ಕೇವಲ ೧೩ ಟಿ-೨೦ ಪಂದ್ಯ ಆಡಿದರು. 2015ರಲ್ಲಿ ಅವರು ಜಿಂಬಾಬ್ವೆ ವಿರುದ್ಧ ಆಡಿದ ಏಕದಿನ ಪಂದ್ಯವೇ ಕೊನೆ ಪಂದ್ಯವಾಯಿತು. ಟೆಸ್ಟ್‌ ಕ್ರಿಕೆಟ್‌ ಆಡುವ ಮಹೋನ್ನತ ಬಯಕೆ ಇದ್ದರೂ ಅವರು ಪದಾರ್ಪಣೆ ಮಾಡಲು ಸಹ ಸಾಧ್ಯವಾಗಲಿಲ್ಲ. “ನನ್ನಿಂದ ಉತ್ತಮ ಪ್ರದರ್ಶನ ಹೊರ ಬರದಿದ್ದದ್ದೇ ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಸಮಯ ಉಳಿಯಲು ಸಾಧ್ಯವಾಗಲಿಲ್ಲ” ಎಂದು ಉತ್ತಪ್ಪ ಅವರು ಒಪ್ಪಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಉತ್ತಮ ಸಾಧನೆ

ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಕಾಲ ಆಡದಿದ್ದರೂ, ರಾಬಿನ್‌ ಉತ್ತಪ್ಪ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಐಪಿಎಲ್‌. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ರಾಜಸ್ಥಾನ ರಾಯಲ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌, ಕೋಲ್ಕೊತಾ ನೈಟ್‌ ರೈಡರ್ಸ್‌, ಮುಂಬೈ ಇಂಡಿಯನ್ಸ್‌, ಪುಣೆ ವಾರಿಯರ್ಸ್‌ ಇಂಡಿಯಾ ತಂಡಗಳನ್ನು ಉತ್ತಪ್ಪ ಪ್ರತಿನಿಧಿಸಿದರು. ೨೦೧೪ರಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ಪರ ೬೬೦ ರನ್‌ ಗಳಿಸಿ, ತಂಡವು ಐಪಿಎಲ್‌ ಟ್ರೋಫಿ ಎತ್ತಿಹಿಡಿಯುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದರು. ಹಾಗೆಯೇ, ೨೦೧೦ರಲ್ಲಿ ಆರ್‌ಸಿಬಿ ಪರ ೨೭ ಸಿಕ್ಸರ್‌ ಸಿಡಿಸುವ ಮೂಲಕ ಆ ಸೀಸನ್‌ನಲ್ಲಿ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರ ಎನಿಸಿದರು. ಕಳೆದ ಸೀಸನ್‌ನಲ್ಲಿ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದರು. ಇಂತಹ ಉತ್ತಮ ಆಟದಿಂದಲೇ ಅವರು ಐಪಿಎಲ್‌ನಲ್ಲಿ ೨೦೦ಕ್ಕೂ ಅಧಿಕ ಪಂದ್ಯ ಆಡಲು ಸಾಧ್ಯವಾಯಿತು.

ದೇಶೀಯ ಕ್ರಿಕೆಟ್‌ನಲ್ಲೂ ಹೆಗ್ಗುರುತು

ರಣಜಿ, ಇಂಡಿಯಾ ಬಿ, ವಿಜಯ್‌ ಹಜಾರೆ, ಇರಾನಿ ಕಪ್‌ ಸೇರಿ ದೇಶೀಯ ಹಲವು ಟೂರ್ನಿಗಳಲ್ಲೂ ಬ್ಯಾಟಿಂಗ್‌ ಮೂಲಕ ಉತ್ತಪ್ಪ ಹೆಗ್ಗುರುತು ಮೂಡಿಸಿದ್ದಾರೆ. ಅದರಲ್ಲೂ, ೨೦೧೪-೧೫ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್‌ ಸ್ಕೋರರ್‌ ಎನಿಸಿದ ಅವರು ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆದರು. ಆದರೆ, ಜಿಂಬಾಬ್ವೆ ಸರಣಿಯ ನಂತರ ಅವರು ರಾಷ್ಟ್ರೀಯ ತಂಡದಿಂದಲೇ ದೂರ ಉಳಿಯಬೇಕಾಗಿದ್ದು ವಿಪರ್ಯಾಸ.

ವಿವಾದಗಳಿಂದ ದೂರ, ಫ್ಯಾಮಿಲಿಗೆ ಹತ್ತಿರ

ಉತ್ತಪ್ಪ ಕುಟುಂಬ.

ವಿವಾದಗಳಿಂದ ದೂರವೇ ಉಳಿದ, ಏಳು ಬೀಳುಗಳನ್ನು ಸಮನಾಗಿ ಸ್ವೀಕರಿಸಿದ ರಾಬಿನ್‌ ಉತ್ತಪ್ಪ ಫ್ಯಾಮಿಲಿ ಮ್ಯಾನ್‌ ಎನಿಸಿದ್ದಾರೆ. ಕೊಡಗಿನಲ್ಲಿ ಜನಿಸಿದ ಉತ್ತಪ್ಪ ಹಾಗೆ ನೋಡಿದರೆ ಹಾಕಿ ಪಟು ಆಗಬೇಕಿತ್ತು. ಆದರೆ, ಕ್ರಿಕೆಟ್‌ ಆರಿಸಿಕೊಂಡ ಅವರು ವೃತ್ತಿಜೀವನದ ಜತೆಗೆ ವೈಯಕ್ತಿಕ ಬದುಕನ್ನೂ ಉತ್ತಮವಾಗಿಟ್ಟುಕೊಂಡಿದ್ದಾರೆ. ೨೦೧೬ರಲ್ಲಿ ಟೆನಿಸ್‌ ಆಟಗಾರ್ತಿ ಶೀತಲ್‌ ಗೌತಮ್‌ ಅವರನ್ನು ವರಿಸಿದ ೩೬ ವರ್ಷದ ಉತ್ತಪ್ಪ ಅವರಿಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾಳೆ.

ಇದನ್ನೂ ಓದಿ | Robin Uthappa | ಎಲ್ಲ ಮಾದರಿಯ ಕ್ರಿಕೆಟ್‌ಗೆ ಕನ್ನಡಿಗ ರಾಬಿನ್‌ ಉತ್ತಪ್ಪ ನಿವೃತ್ತಿ

Exit mobile version