Site icon Vistara News

Australian Open: ಫೈನಲ್​​ ಪ್ರವೇಶಿಸಿದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ ಜೋಡಿ

Rohan Bopanna and Matthew Ebden

ಮೆಲ್ಬೊರ್ನ್​: ಭಾರತದ ಹಿರಿಯ ಟೆನಿಸ್‌ ತಾರೆ ರೋಹನ್ ಬೋಪಣ್ಣ(Rohan Bopanna) ಅವರು ಆಸ್ಟ್ರೇಲಿಯನ್ ಓಪನ್(Australian Open) ಟೆನಿಸ್‌ 2024 ರ ಪುರುಷರ ಡಬಲ್ಸ್​ನಲ್ಲಿ ಫೈನಲ್‌ ತಲುಪಿದ್ದಾರೆ. ಮೂಲಕ ಗ್ರ್ಯಾಂಡ್‌ಸ್ಲಾಮ್​ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಬೋಪಣ್ಣ ಮತ್ತು ಅವರ ಜತೆಗಾರ ಮ್ಯಾಥ್ಯೂ ಎಬ್ಡೆನ್(Matthew Ebden) ಗುರುವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಅಧಿಕಾರಯುತ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದ್ದಾರೆ.

ಗುರುವಾರ ನಡೆದ ಪುರುಷರ ಡಬಲ್ಸ್​ನ ಸೆಮಿಫೈನಲ್​ ಪಂದ್ಯದಲ್ಲಿ ವಿಶ್ವ ನಂ.2 ಇಂಡೋ-ಆಸೀಸ್​ ಜೋಡಿ ರೋಚಕ 3 ಸೆಟ್‌ಗಳ ಸೆಮಿ ಕಾದಾಟದಲ್ಲಿ ಥಾಮಸ್ ಮಚಾಕ್ ಮತ್ತು ಜಾಂಗ್ ಝಿಶೆನ್ ಜೋಡಿಯನ್ನು ಸೋಲಿಸಿದರು. ಬೋಪಣ್ಣ-ಎಬ್ಡೆನ್ ಜೋಡಿಯು ಮೊದಲ ಸೆಟ್ ಅನ್ನು 6-3 ರಿಂದ ಆರಾಮವಾಗಿ ಗೆದ್ದುಕೊಂಡರು. ನಂತರ ಎರಡನೇ ಸೆಟ್​ನಲ್ಲಿ 3-6 ರಲ್ಲಿ ಸೋತರು. ಮೂರನೇ ಸೆಟ್‌ನಲ್ಲಿ ಎರಡೂ ಜೋಡಿಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಟೈ ಬ್ರೇಕರ್‌ಗೆ ಕೊಂಡೊಯ್ದರು. ಬೋಪಣ್ಣ ಮತ್ತು ಎಬ್ಡೆನ್ ಅವರು ಟೈ ಬ್ರೇಕರನ್ನು 10-7 ರಿಂದ ಗೆದ್ದು ಫೈನಲ್ ಟಿಕೆಟ್​ ಪಡೆದರು. ಇದೇ ವೇಳೆ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ ಫೈನಲ್‌ ತಲುಪಿದ ಅತ್ಯಂತ ಹಿರಿಯ ಆಟಗಾರ ಎನ್ನುವ ತಮ್ಮದೇ ದಾಖಲೆಯನ್ನು ಮುರಿದರು.

ಮೊದಲ ಫೈನಲ್​


ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು. 2023ರಲ್ಲಿ ನಡೆದಿದ್ದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಫೈನಲ್​ನಲ್ಲಿ ಸೋತು ರನ್ನರ್​ ಅಪ್​ಗೆ ತೃಪ್ತಿಪಟ್ಟಿದ್ದರು. ಈ ಬಾರಿಯ ಆಟವನ್ನು ನೋಡುವಾಗ ಬೋಪಣ್ಣ-ಎಬ್ಡೆನ್ ಜೋಡಿ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕುವ ನಿರೀಕ್ಷೆಯಲ್ಲಿದ್ದಾರೆ.

ಎರಡನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಮೂರನೇ ಸೆಟ್‌ನಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಂದ ಕೆಲವು ತೀವ್ರ ಪ್ರತಿರೋಧವನ್ನು ಎದುರಿಸಿತು. ಆದರೆ ಅಂತಿಮವಾಗಿ ಸೂಪರ್ ಟೈ ಬ್ರೇಕರ್ಸ್​ನಲ್ಲಿ ಮೇಲುಗೈ ಸಾಧಿಸಿದ ಬೋಪಣ್ಣ-ಎಬ್ಡೆನ್ ಜೋಡಿ 6-3 3-6 7-6 (10-7) ಅಂಕಗಳೊಂದಿಗೆ ಹೆದ್ದು ಫೈನಲ್​ಗೆ ಮುನ್ನಡೆದರು. ಈ ಹೋರಾಟ ಎರಡು ಗಂಟೆ ಎರಡು ನಿಮಿಷದ ವರೆಗೆ ಸಾಗಿತು.

ಇದನ್ನೂ ಓದಿ Australian Open: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಎಬ್ಡೆನ್‌ ಜೋಡಿ

ಬುಧವಾರ ನಡೆದಿದ್ದ ಕ್ವಾರ್ಟರ್​ ಫೈನಲ್​ನಲ್ಲಿ ಬೋಪಣ್ಣ ಮತ್ತು ಅವರ ಜತೆಗಾರ ಮ್ಯಾಥ್ಯೂ ಎಬ್ಡೆನ್ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊಂಝಾಲೆಝ್-ಆ್ಯಂಡ್ರೆಸ್‌ ಮಾಲ್ಟೆನಿ ಜೋಡಿಗೆ 6-4, 7-6 (5) ಅಂತರದ ನೇರ ಸೆಟ್​ಗಳ ಸೋಲಿನ ಆಘಾತವಿಕ್ಕಿದ್ದರು. 43 ನೇ ವಯಸ್ಸಿನ ಬೋಪಣ್ಣ ಕೊಡಗು ಮೂಲದವರಾಗಿದ್ದಾರೆ. ವಿಶ್ವದ ನಂ.1 ಪುರುಷರ ಡಬಲ್ಸ್ ಆಟಗಾರ ಎನಿಸಿಕೊಂಡಿರುವ ಅವರು ಶ್ರೇಯಾಂಕಗಳನ್ನು ನವೀಕರಿಸಿದಾಗ ಕ್ರೀಡಾ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

Exit mobile version