Site icon Vistara News

Australian Open: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಎಬ್ಡೆನ್‌ ಜೋಡಿ

rohan bopanna and matthew ebden

ಮೆಲ್ಬರ್ನ್: ರೋಹನ್‌ ಬೋಪಣ್ಣ(Rohan Bopanna) ಮತ್ತು ಅವರ ಆಸ್ಟ್ರೇಲಿಯನ್‌ ಜತೆಗಾರ ಮ್ಯಾಥ್ಯೂ ಎಬ್ಡೆನ್‌(Matthew Ebden) ಆಸ್ಟ್ರೇಲಿಯನ್‌ ಓಪನ್​ನಲ್ಲಿ(Australian Open) ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕ್ವಾರ್ಟರ್​ ಫೈನಲ್​ ಮುಖಾಮುಖಿಯಲ್ಲಿ ಇಂಡೋ-ಆಸೀಸ್​ ಜೋಡಿ ಅರ್ಜೆಂಟೀನಾದ 6ನೇ ಶ್ರೇಯಾಂಕದ ಮ್ಯಾಕ್ಸಿಮೊ ಗೊಂಝಾಲೆಝ್-ಆ್ಯಂಡ್ರೆಸ್‌ ಮಾಲ್ಟೆನಿ ವಿರುದ್ಧ 6-4, 7-6 (5) ಅಂತರದಿಂದ ಮಣಿಸಿ ಈ ಸಾಧನೆ ಮಾಡಿದೆ.

ಬುಧವಾರ ನಡೆದ ಕ್ವಾರ್ಟರ್​ ಫೈನಲ್​ನಲ್ಲಿ ಬೋಪಣ್ಣ ಮತ್ತು ಅವರ ಜತೆಗಾರ ಮ್ಯಾಥ್ಯೂ ಎಬ್ಡೆನ್ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊಂಝಾಲೆಝ್-ಆ್ಯಂಡ್ರೆಸ್‌ ಮಾಲ್ಟೆನಿ ಜೋಡಿಗೆ ನೇರ ಸೆಟ್​ಗಳ ಸೋಲಿನ ಆಘಾತವಿಕ್ಕಿದರು. ಈ ಹೋರಾಟ ಕೇವಲ ಒಂದು ಗಂಟೆ 46 ನಿಮಿಷದಲ್ಲಿ ಅಂತ್ಯ ಕಂಡಿತು.

ಸೋಮವಾರ ನಡೆದ ಜಿದ್ದಾಜಿದ್ದಿ ಪಂದ್ಯದಲ್ಲಿ ಬೋಪಣ್ಣ-ಎಬ್ಡೆನ್‌ ಜೋಡಿ ನೆದರ್ಲೆಂಡ್ಸ್‌ನ ವೆಸ್ಲಿ ಕೂಲೋಫ್ ಮತ್ತು ಕ್ರೊವೇಶಿಯಾದ ನಿಕೋಲ ಮೆಕ್ಟಿಕ್‌ ಜೋಡಿಯನ್ನು 7-6 (10-8), 7-6 (7-4) ಅಂತರ ದಿಂದ ಪರಾಭವಗೊಳಿಸಿದ್ದರು. ಸದ್ಯ ಸೆಮಿಫೈನಲ್​ ಪ್ರವೇಶಿಸಿರುವ ಈ ಜೋಡಿ ಈ ಹರ್ಡಲ್ಸ್​ ದಾಟಿದರೆ ಪ್ರಶಸ್ತಿಯೊಂದನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಎರಡನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಸೆಮಿಫೈನಲ್‌ನಲ್ಲಿ ಶ್ರೇಯಾಂಕ ರಹಿತ ತೋಮಸ್ ಮಚಾಕ್ ಮತ್ತು ಝಿಜೆನ್ ಝಾಂಗ್ ಅವರ ಎದುರಿಗೆ ಆಡಲಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್-ಫೈನಲ್ ಗೆಲುವು ಸಾಧಿಸಿದವರಲ್ಲಿ ಬೋಪಣ್ಣ ವಿಶ್ವದ ನಂ.1 ಹಿರಿಯ ಪುರುಷ ಆಟಗಾರರಾಗಿದ್ದಾರೆ. ಶ್ರೇಯಾಂಕಗಳ ಪ್ರಕಾರ ಅವರು ಕ್ರೀಡಾ ಇತಿಹಾಸದಲ್ಲಿ ಗೆದ್ದ ಅತ್ಯಂತ ಹಿರಿಯ ಆಟಗಾರ. ಬೋಪಣ್ಣ ಅವರು ಗ್ರ್ಯಾಂಡ್ ಸ್ಲಾಮ್ ಫೈನಲ್‌ಗೆ ಅರ್ಹತೆ ಪಡೆದ ಅತ್ಯಂತ ಹಿರಿಯ ವ್ಯಕ್ತಿಯೂ ಹೌದು. ಈ ಹೆಗ್ಗಳಿಕೆ ಪಡೆದ ಒಂದು ವರ್ಷದ ನಂತರ ಈ ಸಾಧನೆ ಬಂದಿದೆ. ಅವರು ಮತ್ತು ಅವರ ಪಾಲುದಾರ ಎಬ್ಡೆನ್ US ಓಪನ್ 2023ರ ಫೈನಲ್‌ನಲ್ಲಿ ಸೋತಿದ್ದರು. ಬೋಪಣ್ಣ ಅವರು 20 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಟೆನಿಸ್‌ಗೆ ಪದಾರ್ಪಣೆ ಮಾಡಿದ್ದರು.

ಇದನ್ನೂ ಒದಿ Australian Open 2024: ಇತಿಹಾಸ ಸೃಷ್ಟಿಸಿದ ರೋಹನ್‌ ಬೋಪಣ್ಣ; ನಂ.1 ಹಿರಿಯ ಟೆನಿಸ್‌ ಆಟಗಾರ

ಇದಕ್ಕೂ ಮುನ್ನ ಅಮೆರಿಕದ ರಾಜೀವ್ ರಾಮ್ ವಿಶ್ವದ ನಂ.1 ಹಿರಿಯ ಆಟಗಾರರಾಗಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 38ನೇ ವಯಸ್ಸಿನಲ್ಲಿ ಅಕ್ಟೋಬರ್ 2022ರಲ್ಲಿ ಅಗ್ರ ಶ್ರೇಯಾಂಕ ಸಾಧಿಸಿದ್ದರು. 2013ರಲ್ಲಿ ಮೊದಲ ಬಾರಿಗೆ ವಿಶ್ವದ ನಂ. 3 ರ್ಯಾಂಕ್ ಗಳಿಸಿದ್ದ ಬೋಪಣ್ಣ, ಲಿಯಾಂಡರ್ ಪೇಸ್, ​​ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ನಂತರ ಡಬಲ್ಸ್‌ನಲ್ಲಿ ವಿಶ್ವದ ನಂಬರ್ ಒನ್ ರ್ಯಾಂಕ್ ಪಡೆದ ನಾಲ್ಕನೇ ಭಾರತೀಯರಾಗಿದ್ದಾರೆ.

Exit mobile version