Site icon Vistara News

Australian Open 2024: ಐತಿಹಾಸಿಕ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದ ಕನ್ನಡಿಗ ರೋಹನ್​ ಬೋಪಣ್ಣ

Rohan Bopanna - Matt Ebden

ಮೆಲ್ಬೋರ್ನ್: ಭಾರತದ ಹಿರಿಯ ಟೆನಿಸಿಗ, ಡಬಲ್ಸ್​ ವಿಶ್ವ ನಂ.1 ಆಟಗಾರ, ಕನ್ನಡಿಗ ರೋಹನ್​ ಬೋಪಣ್ಣ(Rohan Bopanna) ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯಲ್ಲಿ(Australian Open 2024) ಅಭೂತಪೂರ್ವ ಸಾಧನೆ ತೋರಿದ್ದಾರೆ. ಪರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಈ ಮೂಲಕ ಓಪನ್​ ಯುಗದಲ್ಲಿ ಗ್ರ್ಯಾನ್‌ ಸ್ಲಾಮ್‌ ಟ್ರೋಫಿ ಗೆದ್ದ ಅತಿ ಹಿರಿಯ ಟೆನಿಸಿಗ ಎನಿಸಿಕೊಂಡರು.

ಶನಿವಾರ ನಡೆದ ಜಿದ್ದಾಜಿದ್ದಿನ ಪುರುಷರ ಡಬಲ್ಸ್​ ಫೈನಲ್​(Australian Open Men’s Doubles Final) ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌(Matthew Ebden) ಸೇರಿಕೊಂಡು ಇಟಲಿಯ ಸಿಮೋನ್​ ಬೊಲೆಲ್ಲಿ-ಆ್ಯಂಡ್ರಿಯಾ ವಸಸ್ಸೊರಿ ವಿರುದ್ಧ 7-6(7-0), 7-5 ನೇರ ಸೆಟ್​ಗಳಿಂದ ಗೆಲುವು ಸಾಧಿಸಿದರು.

ಇದು ರೋಹನ್​ ಬೋಪಣ್ಣಗೆ ಒಲಿದ 2ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ಅವರು 2017ರಲ್ಲಿ ಫ್ರೆಂಚ್​ ಓಪನ್​ ಟೂರ್ನಿಯ ವಿಶ್ರ ಡಬಲ್ಸ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು. ಕೆನಡಾದ ಗ್ಯಾಬ್ರಿಯೆಲಾ ಡಬ್ರೊವೊಸ್ಕಿ ಜತೆಗೂಡಿ ಆಡುವ ಮೂಲಕ ಈ ಸಾಧನೆ ಮಾಡಿದ್ದರು. 2013 ಮತ್ತು 2023ರಲ್ಲಿ ಯುಎಸ್​ ಓಪನ್​ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದ್ದರೂ ಇಲ್ಲಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 

 43 ನೇ ವಯಸ್ಸಿನ ಬೋಪಣ್ಣ ಕೊಡಗು ಮೂಲದವರಾಗಿದ್ದಾರೆ. ವಿಶ್ವದ ನಂ.1 ಪುರುಷರ ಡಬಲ್ಸ್ ಆಟಗಾರ ಎನಿಸಿಕೊಂಡಿರುವ ಅವರು ಶ್ರೇಯಾಂಕಗಳನ್ನು ನವೀಕರಿಸಿದಾಗ ಕ್ರೀಡಾ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಗುರುವಾರ ನಡೆದಿದ್ದ ಪುರುಷರ ಡಬಲ್ಸ್​ನ ಸೆಮಿಫೈನಲ್​ ಪಂದ್ಯದಲ್ಲಿ ಇಂಡೋ-ಆಸೀಸ್​ ಜೋಡಿ ರೋಚಕ 3 ಸೆಟ್‌ಗಳ ಕಾದಾಟದಲ್ಲಿ ಥಾಮಸ್ ಮಚಾಕ್ ಮತ್ತು ಜಾಂಗ್ ಝಿಶೆನ್ ಜೋಡಿಯನ್ನು 6-3 3-6 7-6 (10-7)  ಸೋಲಿಸಿ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಫೈನಲ್​ನಲ್ಲಿಯೂ ದಿಟ್ಟ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು.

Exit mobile version