Site icon Vistara News

Rohan Bopanna : ಅಂತಾರಾಷ್ಟ್ರೀಯ ಟೆನಿಸ್​ಗೆ ವಿದಾಯ ಘೋಷಿಸಿದ ಕನ್ನಡಿಗ ರೋಹನ್ ಬೋಪಣ್ಣ

Rohan Bopanna

ಬೆಂಗಳೂರು: 2024ರ ಪ್ಯಾರಿಸ್ ಒಲಿಂಪಿಕ್ಸ್​ನ ಟೆನಿಸ್​ ಸ್ಪರ್ಧೆಯಲ್ಲಿ ಸೋತು ನಿರ್ಗಮಿಸಿದ ಹೆಮ್ಮೆಯ ಕನ್ನಡಿಗ ರೋಹನ್ ಬೋಪಣ್ಣ (Rohan Bopanna) ಭಾರತೀಯ ಟೆನಿಸ್​ಗೆ ನಿವೃತ್ತಿ ಘೋಷಿಸಿದ್ದಾರೆ. ಜುಲೈ 28ರ ಭಾನುವಾರ ನಡೆದ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಫ್ರೆಂಚ್ ಜೋಡಿ ಗೇಲ್ ಮೊನ್ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು. ಒಂದು ಗಂಟೆ 16 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ ಜೋಡಿ 5-7, 2-6 ಅಂತರದಲ್ಲಿ ಸೋಲನುಭವಿಸಿತು. ಇದಾಗ ಬಳಿಕ ಅವರು ನಿವೃತ್ತಿ ಪ್ರಕಟಿಸಿದ್ದಾರೆ.

ನಿವೃತ್ತಿಯ ಮೂಲಕ ಬೋಪಣ್ಣ ಅವರು ಜಪಾನ್​ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಸಾನಿಯಾ ಮಿರ್ಜಾ ಜೊತೆಗೂಡಿ ಮಿಶ್ರ ಡಬಲ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕ ಗೆಲ್ಲಲು ವಿಫಲರಾಗಿದ್ದರು. ಆದಾಗ್ಯೂ ಅವರ ಸಾಧನೆ ಭಾರತೀಯರ ಹೆಮ್ಮೆಗೆ ಕಾರಣವಾಗಿತ್ತು. 2024ರಲ್ಲಿ, ಅವರಿಗೆ ಮತ್ತೊಂದು ಅವಕಾಶ ಇದ್ದರೂ ಫ್ರೆಂಚ್ ಎದುರಾಳಿಗಳ ವಿರುದ್ದ ಸೆಣಸಾಡುವಲ್ಲಿ ವೈಫಲ್ಯ ಕಂಡರು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಜುಲೈ 30ರಂದು ಭಾರತದ ವೇಳಾಪಟ್ಟಿ ಈ ರೀತಿ ಇದೆ

ಬೋಪಣ್ಣ ತಮ್ಮ 22 ನೇ ವಯಸ್ಸಿನಲ್ಲಿ ಭಾರತಕ್ಕಾಗಿ ಪಾದಾರ್ಪಣೆ ಮಾಡಿದ್ದರು. ವಿದಾಯ ಘೋಷಿಸಿರು ಅವರು ದೀರ್ಘ ಕಾಲ ರಾಷ್ಟ್ರೀಯ ಜೆರ್ಸಿ ಧರಿಸಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ನನಗೆ ತುಂಬಾ ಹೆಮ್ಮೆ ಇದೆ’
“ಇದು ಖಂಡಿತವಾಗಿಯೂ ದೇಶಕ್ಕಾಗಿ ನನ್ನ ಕೊನೆಯ ಸ್ಪರ್ಧೆಯಾಗಿದೆ. ನಾನು ಎಲ್ಲಿದ್ದೇನೆ ಎಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ .ಈಗ, ನಾನು ಟೆನಿಸ್ ಸರ್ಕೀಟ್​ನಿಂದ ನಿರ್ಗಮಿಸಲಿದ್ದೇನೆ ಎಂದು ಬೋಪಣ್ಣ ಹೇಳಿದ್ದಾರೆ.

ನನಗೆ ಸಿಕ್ಕಿರುವ ಅವಕಾಶ ದೊಡ್ಡ ಬೋನಸ್ ಆಗಿದೆ. ನಾನು ಎರಡು ದಶಕಗಳ ಕಾಲ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. 2002ರಿಂದ ಅಂತಾರಾಷ್ಟ್ರೀಯ ಟೆನಿಸ್​ಗೆ ಪದಾರ್ಪಣೆ ಮಾಡಿ, 22 ವರ್ಷಗಳ ನಂತರವೂ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. ಅದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದು ಅವರು ಹೇಳಿದ್ದಾರೆ.

2010ರಲ್ಲಿ ಬ್ರೆಜಿಲ್ ವಿರುದ್ಧದ ಡೇವಿಸ್ ಕಪ್ ಪಂದ್ಯದಲ್ಲಿ ರಿಕಾರ್ಡೊ ಮೆಲ್ಲೊ ವಿರುದ್ಧ ಗೆಲುವು ಸಾಧಿಸಿದ್ದು ಭಾರತಕ್ಕಾಗಿ ಆಡುವಾಗ ತನ್ನ ಅತ್ಯುತ್ತಮ ಕ್ಷಣ ಎಂದು ಬೋಪಣ್ಣ ಹೇಳಿದ್ದಾರೆ. “ಇದು ಖಂಡಿತವಾಗಿಯೂ ಡೇವಿಸ್ ಕಪ್ ಇತಿಹಾಸದಲ್ಲಿ ಒಂದಾಗಿದೆ. ಇದು ನನ್ನ ಅತ್ಯುತ್ತಮ ಕ್ಷಣ, ಅದು ಚೆನ್ನೈನಲ್ಲಿ ಮತ್ತು ನಂತರ ಬೆಂಗಳೂರಿನಲ್ಲಿ ಸರ್ಬಿಯಾ ವಿರುದ್ಧ ಐದು ಸೆಟ್ ಗಳ ಡಬಲ್ಸ್ ಗೆದ್ದಿದ್ದರಲ್ಲಿ ಖುಷಿಯಿದೆ ಎಂದು ಹೇಳಿದ್ದಾರೆ.

ಈ ಪ್ರಯಾಣದಲ್ಲಿ ಅನೇಕ ತ್ಯಾಗಗಳನ್ನು ಮಾಡಿದ ನನ್ನ ಪತ್ನಿಗೆ (ಸುಪ್ರಿಯಾ) ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

Exit mobile version