Site icon Vistara News

Rohan Bopanna: ಡೇವಿಸ್‌ ಕಪ್​ ವಿದಾಯಕ್ಕೆ ರೋಹನ್‌ ಬೋಪಣ್ಣ ನಿರ್ಧಾರ

davis cup

ಬೆಂಗಳೂರು: ಭಾರತದ ಖ್ಯಾತ ಅನುಭವಿ ಟೆನಿಸ್​ ಆಟಗಾರ, ಕನ್ನಡಿಗ ರೋಹನ್‌ ಬೋಪಣ್ಣ(Rohan Bopanna) ಅವರು ಮುಂದಿನ ಸೆಪ್ಟಂಬರ್‌ನಲ್ಲಿ ಡೇವಿಸ್‌ ಕಪ್‌(Davis Cup) ಟೆನಿಸ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಜತೆಗೆ ತಮ್ಮ ವಿದಾಯ ಪಂದ್ಯವನ್ನು ತವರಾದ ಬೆಂಗಳೂರಿನಲ್ಲೇ ಆಡಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರ ಈ ಬಯಕೆ ಈಡೇರುವ ಸಾಧ್ಯತೆ ಇಲ್ಲ. ಏಕೆಂದರೆ ಸೆಪ್ಟಂಬರ್‌ನಲ್ಲಿ ಮೊರೊಕ್ಕೊ ವಿರುದ್ಧ ಭಾರತ ವಿಶ್ವ ಗ್ರೂಪ್‌ ಸೆಕೆಂಡ್‌ ಟೈ ಡೇವಿಸ್‌ ಕಪ್‌ ಪಂದ್ಯ ಆಡುವುದಾದರೂ ಇದರ ಆತಿಥ್ಯವನ್ನು ಎಐಟಿಎ(AITA) ಈಗಾಗಲೇ ಉತ್ತರಪ್ರದೇಶಕ್ಕೆ ನೀಡಿದೆ.

ಮೂಲತಃ ಕೊಡಗಿನವರಾದ 43 ವರ್ಷದ ಬೋಪಣ್ಣ ಭಾರತದ ಟೆನಿಸ್​ಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. 2002ರಲ್ಲಿ ಡೇವಿಸ್‌ ಕಪ್‌ಗೆ ಪದಾರ್ಪಣೆ ಮಾಡಿದ ಅವರು ಎಟಿಪಿ ಟೂರ್‌ಗಳಲ್ಲಿ ಸಕ್ರಿಯರಾಗಿದ್ದು, ಭಾರತವನ್ನು 32 ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ 12 ಸಿಂಗಲ್ಸ್‌ ಮತ್ತು 10 ಡಬಲ್ಸ್‌ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ದಿಗ್ಗಜ ಲಿಯಾಂಡರ್‌ ಪೇಸ್‌ ಅವರು 58 ಪಂದ್ಯಗಳಲ್ಲಿ ಆಡುವ ಮೂಲಕ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ.

ನಿವೃತ್ತಿಯ ಕುರಿತು ಮಾತನಾಡಿದ ಬೋಪಣ್ಣ ,“ಸೆಪ್ಟಂಬರ್‌ನಲ್ಲಿ ನಾನು ಕೊನೆಯ ಡೇವಿಸ್‌ ಕಪ್‌ ಪಂದ್ಯವನ್ನು ಆಡಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಬಯಕೆಯೆಂದರೆ ತವರಾದ ಬೆಂಗಳೂರಿನಲ್ಲಿ ವಿದಾಯ ಪಂದ್ಯವನ್ನು ಆಡುವುದು. ಭಾರತದ ಎಲ್ಲ ಆಟಗಾರರೊಂದಿಗೆ ಈ ಕುರಿತು ಮಾತಾಡಿದ್ದೇನೆ. ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಶನ್‌ ಕೂಡ ಸಕರಾತ್ಮಕವಾಗಿ ಸ್ಪಂದಿಸಿದೆ. ಆದರೆ ಭಾರತೀಯ ಟೆನಿಸ್‌ ಅಸೋಸಿಯೇಶನ್‌ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕು. ಒಂದೊಮ್ಮೆ ನನ್ನ ಮನವಿಯನ್ನು ಸ್ವೀಕರಿಸಿ ತವರಿನಲ್ಲಿ ಟೂರ್ನಿ ನಡೆದರೆ ಇದಂಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ ATP Rankings: ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ರೋಹನ್‌ ಬೋಪಣ್ಣ

ಇದೇ ವೇಳೆ ಎಟಿಪಿ ಟೂರ್‌ಗಳಲ್ಲಿ ಆಡುವು ಕುರಿತು ಮಾಹಿತಿ ನೀಡಿದ ಅವರು ಇಲ್ಲಿ ಆಡದೇ ಹೋದರೆ ಈ ಸ್ಥಾನ ಮತ್ತೂಬ್ಬ ಭಾರತೀಯ ಆಟಗಾರನಿಗೆ ಲಭಿಸುತ್ತದೆ ಎಂಬ ಕುರಿತು ಯಾವುದೇ ಖಾತ್ರಿ ಇಲ್ಲ. ಉದಾಹರಣೆಗೆ ವಿಂಬಲ್ಡನ್‌. ನನ್ನ ಸ್ಥಾನ ಇನ್ಯಾರೋ ವಿದೇಶಿ ಆಟಗಾರನ ಪಾಲಾಗುತ್ತದೆ. ಆದರೆ ಡೇವಿಸ್‌ ಕಪ್‌ನಿಂದ ದೂರ ಸರಿದರೆ ಈ ಅವಕಾಶ ಭಾರತದ ಟೆನಿಸಿಗನಿಗೇ ಅವಕಾಶ ಸಿಗುತ್ತದೆ ಎಂದು ಹೇಳಿದರು. ಸದ್ಯ ಅವರು ವಿಂಬಲ್ಡನ್​ ಟೂರ್ನಿಯಲ್ಲಿ ಆಡಲು ಸಿದ್ಧತೆ ನಡೆಸುತ್ತಿದ್ದಾರೆ.

Exit mobile version