ನಾಗ್ಪುರ: ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ (INDvsAUS 2023) ಸರಣಿಯ ಮೊದಲ ಪಂದ್ಯದ ಎರಡನೇ ದಿನವಾದ ಶುಕ್ರವಾರ (ಫೆಬ್ರವರಿ 10) ಭಾರತ ತಂಡದ ಬ್ಯಾಟರ್ಗಳು ಸಮಯೋಚಿತ ಪ್ರದರ್ಶನ ನೀಡಿದ್ದಾರೆ. ಮೊದಲ ದಿನ ಅರ್ಧ ಶತಕ ಬಾರಿಸಿ ಔಟಾಗದೇ ಉಳಿದಿದ್ದ ನಾಯಕ ರೋಹಿತ್ ಶರ್ಮಾ (120) ಶತಕ ಬಾರಿಸಿದ್ದರೆ, ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ (66 ಬ್ಯಾಟಿಂಗ್) ಹಾಗೂ ಅಕ್ಷರ್ ಪಟೇಲ್ (52 ಬ್ಯಾಟಿಂಗ್) ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂವರು ಬ್ಯಾಟರ್ಗಳ ಸಾಹಸದಿಂದ ಭಾರತ ತಂಡ ದಿನದಾಟ ಮುಕ್ತಾಯದ ವೇಳೆಗೆ ಮೊದಲ ಇನಿಂಗ್ಸ್ನಲ್ಲಿ 7 ವಿಕೆಟ್ಗೆ 321 ರನ್ ಬಾರಿಸಿದ್ದು, 144 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಇಲ್ಲಿನ ವಿಸಿಎ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್ನಲ್ಲಿ 177 ರನ್ ಪೇರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಲು ಶುರುಮಾಡಿದ್ದ ಭಾರತ ತಂಡ ಪ್ರಥಮ ದಿನದ ಆಟದ ಮುಕ್ತಾಯದ ವೇಳೆಗೆ 1 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿತ್ತು. ಎರಡನೇ ದಿನ ಆಟ ಮುಂದುವರಿಸಿದ ಭಾರತ ತಂಡ ರೋಹಿತ್ ಶರ್ಮಾ ಅವರ ಶತಕದ ಹೊರತಾಗಿಯೂ ಅಗ್ರ ಕ್ರಮಾಂಕದ ಇತರ ಬ್ಯಾಟರ್ಗಳ ವೈಫಲ್ಯದಿಂದ ಮಿಶ್ರ ಫಲ ಉಂಡಿತು. ಆದರೆ, ಕೊನೇ ಅವಧಿಯಲ್ಲಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಎಂಟನೇ ವಿಕೆಟ್ಗೆ 81 ರನ್ ಜತೆಯಾಟ ನೀಡಿ ಆಸೀಸ್ ಬೌಲರ್ಗಳನ್ನು ಕಾಡಿದರು. ಅವರಿಬ್ಬರ ಬ್ಯಾಟಿಂಗ್ ಬಲದಿಂದಾಗಿ ಭಾರತ ತಂಡ ಮುನ್ನಡೆಯ ಅಂತರ ಹೆಚ್ಚಿತು . ಏತನ್ಮಧ್ಯೆ, ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಟಾಡ್ ಮರ್ಫಿ 82 ರನ್ಗಳಿಗೆ 5 ವಿಕೆಟ್ ಕಬಳಿಸಿ ಮಿಂಚಿ, ನಾಗ್ಪುರ ಪಿಚ್ ಭಾರತೀಯ ಸ್ಪಿನ್ನರ್ಗಳಿಗೆ ಮಾತ್ರ ನೆರವಾಗುತ್ತದೆ ಎಂಬ ಆಸೀಸ್ ಮಾಧ್ಯಮಗಳ ವಾದವನ್ನು ಸುಳ್ಳಾಗಿಸಿದರು.
ಅದಕ್ಕಿಂತ ಮೊದಲು ದಿನದಾಟ ಆರಂಭಿಸಿದ ನಾಯಕ ರೋಹಿತ್ ಶರ್ಮ ಹಾಗೂ ನೈಟ್ ವಾಚ್ಮನ್ ಆರ್ ಅಶ್ವಿನ್ (23) ದೊಡ್ಡ ಮೊತ್ತ ಪೇರಿಸುವ ಮುನ್ಸೂಚನೆ ಕೊಟ್ಟರು. ಆದರೆ, ಟಾಡ್ ಮರ್ಫಿ ಬ್ಯಾಟರ್ ಅಶ್ವಿನ್ ವಿಕೆಟ್ ತಮ್ಮದಾಗಿಸಿಕೊಂಡರು. ಅದಕ್ಕಿಂತ ಮೊದಲು 31.6 ಓವರ್ಗಳಲ್ಲಿ ಭಾರತ ತಂಡ 100 ರನ್ಗಳ ಗಡಿ ದಾಟಿ ವಿಶ್ವಾಸ ಮೂಡಿಸಿಕೊಂಡಿತು. ಆದರೆ, ಅಶ್ವಿನ್ ವಿಕೆಟ್ ಪತನಗೊಂಡ ಬಳಿಕ ಆಡಲು ಬಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 7 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಹೀಗಾಗಿ ಲಂಚ್ ಬ್ರೇಕ್ ವೇಳೆ ಭಾರತ ತಂಡ ಮೂರು ವಿಕೆಟ್ಗೆ 151 ರನ್ ಬಾರಿಸಿ ಸುಸ್ಥಿತಿಯಲ್ಲಿತ್ತು.
ಭೋಜನ ವಿರಾಮದ ಬಳಿಕ ಭಾರತ ತಂಡಕ್ಕೆ ಬೆನ್ನು ಬೆನ್ನಿಗೆ ಆಘಾತ ಎದುರಾಯಿತು. ವಿರಾಟ್ ಕೊಹ್ಲಿ (12), ಸೂರ್ಯಕುಮಾರ್ ಯಾದವ್ (08) ವಿಕೆಟ್ ಒಪ್ಪಿಸುವ ಮೂಲಕ ಭಾರತ ತಂಡದ ಹಿನ್ನಡೆಗೆ ಕಾರಣರಾದರು. ಈ ವೇಳೆ ಭಾರತ ತಂಡ 168 ರನ್ಗಳಿಗೆ 5 ವಿಕೆಟ್ ನಷ್ಟ ಮಾಡಿಕೊಂಡಿತು. ಅಷ್ಟರವರೆಗೆ ವೇಗದ ಆಟಕ್ಕೆ ಒತ್ತು ಕೊಟ್ಟಿದ್ದ ನಾಯಕ ರೋಹಿತ್ ಶರ್ಮ ನಿಧಾನಗತಿಯ ಆಟಕ್ಕೆ ಮುಂದಾದರು. ಕ್ರಿಸ್ಗೆ ಇಳಿದ ಜಡೇಜಾ ಕೂಡ ಹೆಚ್ಚು ಹೊತ್ತು ಕ್ರೀಸ್ ಕಾಯ್ದುಕೊಂಡು ರನ್ ಪೇರಿಸುವ ತಂತ್ರಕ್ಕೆ ಮೊರೆ ಹೋದರು. ಅಂತಿಮವಾಗಿ ಭಾರತ ತಂಡದ ಸ್ಕೋರ್ 70.1 ಓವರ್ಗಳಲ್ಲಿ 200 ರನ್ಗಳ ಗಡಿ ದಾಟಿತು. ಅದಕ್ಕಿಂತ ಮೊದಲು ರೋಹಿತ್ ಶರ್ಮಾ 171 ಎಸೆತಗಳಲ್ಲಿ ಟೆಸ್ಟ್ ಮಾದರಿಯ 9ನೇ ಶತಕ ಬಾರಿಸಿದರು. ಜಡೇಜಾ ಹಾಗೂ ರೋಹಿತ್ ಚಹಾ ವಿರಾಮದ ತನಕ ನಷ್ಟವಾಗದಂತೆ ನೋಡಿಕೊಂಡರು. ಅದರೆ ಆ ಬಳಿಕ 120 ರನ್ ಬಾರಿಸಿದ್ದ ರೋಹಿತ್ ಶರ್ಮ ನಾಯಕ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಬೆನ್ನಲ್ಲೇ ಪದಾರ್ಪಣೆ ಪಂದ್ಯವಾಡಿದ ಶ್ರೀಕರ್ ಭರತ್ (8) ಔಟಾದರು. ಈ ವೇಳೆ ಭಾರತ 229 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು.
ಇದನ್ನೂ ಓದಿ : Rohit Sharma: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್ ಶರ್ಮಾ
ದಿನದಾಟದ ಕೊನೆಯಲ್ಲಿ ಜಡೇಜಾ ಹಾಗೂ ಅಕ್ಷರ್ ಪಟೇಲ್ ಬ್ಯಾಟಿಂಗ್ ವೈಭವ ತೋರಿದರು. ಜಡೇಜಾ 114 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಅಕ್ಷರ್ ಪಟೇಲ್ 94 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಿಯಾನ್ ಕೂಡ ಒಂದು ವಿಕೆಟ್ ಪಡೆದರು.