ಮುಂಬಯಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಐಪಿಎಲ್ 16ನೇ ಆವೃತ್ತಿಯ (IPL 2023) ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬಯಿ ಇಂಡಿಯನ್ಸ್ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. 201 ರನ್ ಗಳ ಗುರಿ ಬೆನ್ನತ್ತಿದ ಮುಂಬಯಿ ಕೇವಲ 18 ಓವರ್ಗಳಲ್ಲಿ ಕ್ಯಾಮರೂನ್ ಗ್ರೀನ್ ಅವರ ಚೊಚ್ಚಲ ಐಪಿಎಲ್ ಶತಕದ ನೆರವಿನಿಂದ ಜಯ ಸಾಧಿಸಿತು. ಗ್ರೀನ್ ಅವರಲ್ಲದೆ, ನಾಯಕ ರೋಹಿತ್ ಶರ್ಮಾ 27 ಎಸೆತಗಳಲ್ಲಿ 56 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯ ರೋಹಿತ್ ಶರ್ಮಾ ಅವರಿಗೆ ಸ್ಮರಣೀಯವಾಗಿ ಪರಿಣಮಿಸಿತು, ಏಕೆಂದರೆ ಅವರ ತಂಡವು ವಿಜಯವನ್ನು ಗೆದ್ದಿದ್ದು ಮಾತ್ರವಲ್ಲದೆ ಅವರು ಪಂದ್ಯದಲ್ಲಿ ಎರಡು ಪ್ರಮುಖ ಮೈಲುಗಲ್ಲುಗಳನ್ನು ಸಾಧಿಸಿದರು.
11 ಸಾವಿರ ರನ್
ಟಿ20 ಮಾದರಿಯಲ್ಲಿ 11,000 ರನ್ ಪೂರೈಸಿದ ರೋಹಿತ್ ಈ ಅಪರೂಪದ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 11,864 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಮುಂಬಯಿ ಇಂಡಿಯನ್ಸ್ ಪರ 5021 ರನ್ ಪೂರೈಸಿದ ರೋಹಿತ್ ಶರ್ಮಾ ಒಂದು ಫ್ರಾಂಚೈಸಿ ಪರ 5000ಕ್ಕೂ ಹೆಚ್ಚು ರನ್ ಪೂರೈಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊಹ್ಲಿ 7162 ರನ್ ಗಳಿಸಿದ್ದಾರೆ.
201 ರನ್ಗಳ ಗುರಿ ಬೆನ್ನತ್ತಿದ ಮುಂಬಯಿ 12 ಎಸೆತ ಹಾಗೂ 8 ವಿಕೆಟ್ ಕಳೆದುಕೊಂಡು 14 ಪಂದ್ಯಗಳಿಂದ 16 ಅಂಕ ಗಳಿಸಿತು.
ಜಿಯೊ ಬ್ರಾಂಡ್ ಅಂಬಾಸಿಡರ್ ರೋಹಿತ್
ಐಪಿಎಲ್ನ 16ನೇ ಅವೃತ್ತಿಯ ಪಂದ್ಯಗಳನ್ನು ಜಿಯೋ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಮಾಡುತ್ತಿದೆ. ಉಚಿತವಾಗಿ ಸೇವೆ ನೀಡಿರುವ ಕಾರಣ ಬಹುಬೇಗ ಗ್ರಾಹಕರ ಮನಮುಟ್ಟುತ್ತಿದೆ. ದಿನದಿಂದ ದಿನಕ್ಕೆ ಪಂದ್ಯಗಳ ವೀಕ್ಷಕರ ಸಂಖ್ಯೆ ಏರುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದ ಕೊನೇ ಹಂತದಲ್ಲಿ ಒಟ್ಟು 2.4 ಕೋಟಿ ಮಂದಿ ಏಕಕಾಲಕ್ಕೆ ಪಂದ್ಯ ವೀಕ್ಷಿಸುವ ಮೂಲಕ ಹೊಸ ದಾಖಲೆಯೂ ಸೃಷ್ಟಿಯಾಗಿತ್ತು. ಈ ಜನಪ್ರಿಯತೆಯನ್ನು ಇನ್ನುಷ್ಟು ಹಿಗ್ಗಿಸುವ ಉದ್ದೇಶದಿಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಜಿಯೋ ಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರು ಈ ಹಿಂದೆ ಐಪಿಎಲ್ ಪಂದ್ಯಗಳ ನೇರ ಪ್ರಸಾರದ ಹಕ್ಕು ಪಡೆದುಕೊಂಡಿದ್ದ ಸ್ಟಾರ್ ಸ್ಪೋರ್ಟ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದರು. ಐಪಿಎಲ್ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದರು. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್, ಕೆ. ಎಲ್ ರಾಹುಲ್ ಕೂಡ ಸ್ಟಾರ್ ಸ್ಪೋರ್ಟ್ಸ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಇದನ್ನೂ ಓದಿ : IPL 2023 : ಐಪಿಎಲ್ನ ಪ್ಲೇಆಫ್ಗೇರಿದ ತಂಡಗಳು ಯಾವುವು, ಎಲ್ಲಿ ನಡೆಯುತ್ತವೆ ಪಂದ್ಯಗಳು?
ಜಿಯೊ ಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವುದಕ್ಕೆ ರೋಹಿತ್ ಶರ್ಮಾ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ಡಿಜಿಟಲ್ ವೇದಿಕೆಯಲ್ಲಿ ವ್ಯಾಪಕಗೊಳಿಸುತ್ತಿರುವ ಜಿಯೊ ಸಿನಿಮಾ ಜತೆ ಕೈಜೋಡಿಸುವುದಕ್ಕೆ ಸಂತಸವಾಗುತ್ತಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಮೊಬೈಲ್ ಫೋನ್ ಹಾಗೂ ಕನೆಕ್ಟೆಡ್ ಟಿವಿ ಮೂಲಕ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಜಿಯೊ ಸಿನಿಮಾ ಕ್ರಿಕೆಟ್ ಪ್ರೇಮಿಗಳಿಗೆ ಅನುವು ಮಾಡಿಕೊಡುತ್ತಿದೆ. ಹಲವಾರು ಹೊಸ ಆಯ್ಕೆಗಳನ್ನೂ ಈ ವೇದಿಕೆಯಲ್ಲಿ ನೀಡಲಾಗುತ್ತಿದೆ. ಕ್ರಿಕೆಟ್ ವೀಕ್ಷಣೆಗೆ ಹೆಚ್ಚು ಅವಕಾಶಗಳು, ವೈಯುಕ್ತಿಕ ಆಯ್ಕೆಗಳು ಸೇರಿದಂತೆ ಕ್ರಿಕೆಟ್ ಪಂದ್ಯಗಳನ್ನು ಡಿಜಿಟಲ್ ವೇದಿಕೆಗೆ ತಂದಿರುವ ಜಿಯೊ ಸಿನಿಮಾ ಜತೆ ಕೈ ಜೋಡಿಸಲು ಸಂತಸವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.