ವಿಸ್ತಾರ ನ್ಯೂಸ್ ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಸಂಕ್ಷಿಪ್ತ ರೂಪದ ಕ್ರಿಕೆಟ್ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಪುರುಷರ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 150 ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ. ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ನಡೆಯುತ್ತಿದೆ. ಇದು ಬ್ಯಾಟರ್ಗೆ ವಿಶೇಷ ದಿನವಾಗಿದೆ. ಏಕೆಂದರೆ ಅವರ 150 ಪಂದ್ಯಗಳನ್ನು ಆಡುವ ಜತೆಗೆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಟಿ20 ಮಾದರಿಯಲ್ಲಿ ಭಾರತೀಯ ಕ್ರಿಕೆಟ್ ಮಿನುಗಲು ರೋಹಿತ್ ಶರ್ಮಾ ಕೂಡ ಒಬ್ಬರು. ಅವರು 2007ರಲ್ಲಿ ಈ ಮಾದರಿಗೆ ಪದಾರ್ಪಣೆ ಮಾಡಿದ್ದು. ಅಂದಿನಿಂದ ಈ ಮಾದರಿಯಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಟಿ20 ಪಂದ್ಯಗಳಲ್ಲಿ ಮಾತ್ರವಲ್ಲದೆ ಇತರ ಎರಡು ಸ್ವರೂಪಗಳಲ್ಲಿಯೂ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಹಲವು ವರ್ಷಗಳಿಂದ, ರೋಹಿತ್ ಶರ್ಮಾ ಆಟದ ಅತ್ಯುತ್ತಮ ಪವರ್ ಹಿಟ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸಮಯದಿಂದ ತಂಡದ ಬೆನ್ನೆಲುಬಾಗಿದ್ದಾರೆ. ಬ್ಯಾಟರ್ ಅನೇಕ ವಿಶ್ವ ಪ್ರಸಿದ್ಧ ಇನಿಂಗ್ಸ್ಗಳನ್ನು ಆಡಿದ್ದಾರೆ. ತಂಡವನ್ನು ವಿಶೇಷ ಗೆಲುವುಗಳ ಕಡೆಗೆ ಕೊಂಡೊಯ್ದಿದ್ದಾರೆ.
ರೋಹಿತ್ ಶರ್ಮಾ ಇತ್ತೀಚೆಗೆ ಟಿ20 ಪಂದ್ಯಗಳಲ್ಲಿ 100 ಗೆಲುವುಗಳ ಭಾಗವಾಗಿದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಂಡವು 6 ವಿಕೆಟ್ಗಳ ವಿಜಯ ಸಾಧಿಸಿದ ನಂತರ ಅವರು ಈ ಸಾಧನೆ ಮಾಡಿದ್ದಾರೆ.
ಉತ್ತಮ ರನ್ ಗಳಿಕೆ
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. 149 ಪಂದ್ಯಗಳಿಂದ 140ರ ಸ್ಟ್ರೈಕ್ ರೇಟ್ನಲ್ಲಿ 3853 ರನ್ ಗಳಿಸಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಸೂರ್ಯಕುಮಾರ್ ಯಾದವ್ ಅವರೊಂದಿಗೆ ಟಿ20 ಪಂದ್ಯಗಳಲ್ಲಿ ಜಂಟಿಯಾಗಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ 14 ತಿಂಗಳ ಬಳಿಕ ಟಿ20 ಕ್ರಿಕೆಟ್ಗೆ ಮರಳಿದ್ದಾರೆ. ಕಳೆದ ಟಿ20 ವಿಶ್ವಕಪ್ ನಂತರ ಅವರು ಈ ಮಾದರಿಯಲ್ಲಿ ಯಾವುದೇ ಪಂದ್ಯವನ್ನು ಆಡಿರಲಿಲ್ಲ. ಆದಾಗ್ಯೂ, ಅವರು ರನ್ಔಟ್ ಆಗಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಎರನಡೇ ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗಿದ್ದಾರೆ.
150 ಪಂದ್ಯಗಳ ಸಾಧನೆ
ಪುರುಷರ ವಿಭಾಗದಲ್ಲಿ 150 ಟಿ 20 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ, ಪಾಲ್ ಸ್ಟಿರ್ಲಿಂಗ್ ಮತ್ತು ಜಾರ್ಜ್ ಡಾಕ್ರೆಲ್ ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. ಸ್ಟಿರ್ಲಿಂಗ್ ಮತ್ತು ಜಾರ್ಜ್ ಟಿ 20 ಐ ಕ್ರಿಕೆಟ್ನಲ್ಲಿ ತಮ್ಮ ತಂಡದ ಪರವಾಗಿ 134 ಮತ್ತು 128 ಪಂದ್ಯಗಳನ್ನು ಆಡಿದ್ದಾರೆ. ರೋಹಿತ್ ಶರ್ಮಾ 150 ಟಿ20 ಪಂದ್ಯಗಳನ್ನು ಆಡಿದ ನಾಲ್ಕನೇ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳಾ ಕ್ರಿಕೆಟರ್ಗಳಾದ ಹರ್ಮನ್ ಪ್ರೀತ್ ಕೌರ್ (161), ಸುಜಿ ಬೇಟ್ಸ್ (152), ಡ್ಯಾನಿ ವ್ಯಾಟ್ (151) ಮತ್ತು ಅಲಿಸ್ಸಾ ಹೀಲಿ (150) ಅವರ ಸಾಲಿಗೆ ಸೇರಲಿದ್ದಾರೆ.