Site icon Vistara News

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

Rohit Sharma Birthday

ಮುಂಬಯಿ: ಭಾರತ ಕ್ರಿಕೆಟ್​ ತಂಡದ ನಾಯಕ, ಹಿಟ್​ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ(Rohit Sharma Birthday) ಅವರಿಗೆ ಇಂದು 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. 30 ಏಪ್ರಿಲ್ 1987ರಲ್ಲಿ ಜನಿಸಿದ ರೋಹಿತ್​ ಅವರ ಪೂರ್ಣ ಹೆಸರು ರೋಹಿತ್ ಗುರುನಾಥ್ ಶರ್ಮಾ. ಏಕದಿನ ಕ್ರಿಕೆಟ್​​ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಖ್ಯಾತಿ ಇವರದ್ದು. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರೋಹಿತ್​ಗೆ ಬಿಸಿಸಿಐ, ಮುಂಬೈ ಇಂಡಿಯನ್ಸ್​ ಸೇರಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ.

ನವೆಂಬರ್ 2013 ರಲ್ಲಿ, ಸಚಿನ್ ತೆಂಡೂಲ್ಕರ್ ಅವರ ವಿದಾಯ ಸರಣಿಯ ಸಮಯದಲ್ಲಿ, ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ತಮ್ಮ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಸದ್ಯ ರೋಹಿತ್ ಶರ್ಮಾ ಟೀಂ ಇಂಡಿಯಾದ 3 ಮಾದರಿಯ ನಾಯಕರಾಗಿದ್ದಾರೆ.

ಇದನ್ನೂ ಓದಿ IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ಉತ್ತಮ ಸಾಧನೆ ಮಾಡಿರುವ ರೋಹಿತ್​ ನಾಯಕನಾಗಿ ಮುಂಬೈ ತಂಡಕ್ಕೆ 5 ಬಾರಿ ಕಪ್​ ಗೆದ್ದಿದ್ದಾರೆ. 252 ಐಪಿಎಲ್​ ಪಂದ್ಯಗಳಿಂದ 6522 ರನ್​, 2 ಶತಕ ಮತ್ತು 42 ಅರ್ಧಶತಕ ಬಾರಿಸಿದ್ದಾರೆ.

ರೋಹಿತ್ ಶರ್ಮಾ ಕ್ರಿಕೆಟ್ ಸಾಧನೆಗೆ 2015ರಲ್ಲಿ ಅರ್ಜುನ ಪ್ರಶಸ್ತಿ, 2020ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳು ಲಭಿಸಿವೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಎಲ್ಲ ಲೀಗ್​ ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿತ್ತು. ಆದರೆ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿ ವಂಚಿತವಾಗಿತ್ತು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಸಾರಥ್ಯದಲ್ಲೇ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ಟಿ20 ವಿಶ್ವಕಪ್​ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

Exit mobile version