Site icon Vistara News

IPL 2023 : ಡಕ್​ಔಟ್​ ಆಗುವ ಮೂಲಕ ಅನಗತ್ಯ ದಾಖಲೆ ಸೃಷ್ಟಿಸಿಕೊಂಡ ರೋಹಿತ್ ಶರ್ಮಾ

Rohit Sharma creates unnecessary record by being dismissed for a duck

ಮುಂಬಯಿ: ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ರನ್​ ಬರ ಎದುರಿಸುತ್ತಿದ್ದಾರೆ. ಯಾವುದೇ ಪಂದ್ಯದಲ್ಲಿ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರ ಬಗ್ಗೆ ಸಣ್ಣ ಪ್ರಮಾಣದ ಟೀಕೆಗಳು ವ್ಯಕ್ತಗೊಳ್ಳುತ್ತಿವೆ. ಅವರ ಕಳಪೆ ಪ್ರದರ್ಶನದಿಂದಾಗಿ ಮುಂಬಯಿ ಇಂಡಿಯನ್ಸ್ ತಂಡ ಆರಂಭಿಕ ರನ್​ ಗಳಿಕೆಯೂ ಉತ್ತಮವಾಗುತ್ತಿಲ್ಲ. ಏತನ್ಮಧ್ಯೆ ಅವರು ಬುಧವಾರ ನಡೆದ ಪಂಜಾಬ್​ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಅವರು ಕಳಪೆ ಸಾಧನೆ ಮಾಡಿದ ದಾಖಲೆ ಬರೆದಿದ್ದಾರೆ.

ಪಂಜಾಬ್‌ ಕಿಂಗ್ಸ್ ವಿರುದ್ಧ ಆಡಲು ಕಣಕ್ಕೆ ಇಳಿಯುತ್ತಿದ್ದಂತೆ ರೋಹಿತ್ ಶರ್ಮಾ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಪರ 200 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದರು. ಆದರೆ, ಈ ಪಂದ್ಯವನ್ನು ಅವರಿಗೆ ಸ್ಮರಣೀಯಗೊಳಿಸಲು ಸಾಧ್ಯವಾಗಲಿಲ್ಲ. ಕೇವಲ 3 ಎಸೆತಗಳಲ್ಲಿ ಶೂನ್ಯಕ್ಕೆ ಔಟ್​ ಆದರು. ರಿಷಿ ಧವನ್‌ ಎಸೆತದಲ್ಲಿ ಪಾಯಿಂಟ್‌ ಮೇಲೆ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ಕ್ಯಾಚಿತ್ತರು. ಈ ಮೂಲಕ ಅವರು ಭಾರವಾದ ಹೆಜ್ಜೆಯೊಂದಿಗೆ ಪೆವಿಲಿಯನ್​ಗೆ ನಡೆದರು.

ಔಟ್​ ಆಗುತ್ತಿದ್ದಂತೆ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಡಕೌಟ್ ಆದ ನಾಯಕ ಎಂಬ ಅನಗತ್ಯ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡರು. ತಮ್ಮ ನಾಯಕತ್ವದ ಪಂದ್ಯಗಳಲ್ಲಿ ಅವರು 10 ಬಾರಿ ಶೂನ್ಯಕ್ಕೆ ಔಟಾದರು. ಕೋಲ್ಕತಾ ನೈಟ್ ರೈಡರ್ಸ್ ಮಾಜಿ ನಾಯಕ, ಹಾಗೂ ಹಾಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಮೆಂಟರ್​​ ಗೌತಮ್ ಗಂಭೀರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಗಂಭೀರ್‌ ಕೂಡ 10 ಬಾರಿ ಡಕೌಟ್ ಆಗಿದ್ದಾರೆ. ಡೆಕ್ಕನ್ ಚಾರ್ಜರ್ಸ್ ತಂಡದ ಮಾಜಿ ನಾಯಕ ಆಡಂ ಗಿಲ್‌ಕ್ರಿಸ್ಟ್ (7 ಬಾರಿ), ಆಸ್ಟ್ರೇಲಿಯಾ ದಿಗ್ಗಜ ಶೇನ್ ವಾಟ್ಸನ್ (7 ಬಾರಿ) ನಂತರದ ಸ್ಥಾನಗಳಲ್ಲಿದ್ದಾರೆ.

ಹಿಟ್​ಮ್ಯಾನ್ ರೋಹಿತ್​ ಶರ್ಮಾ ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಸಂಪೂರ್ಣ ಎಡವಿದ್ದಾರೆ. ರೋಹಿತ್​ ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ ಏಕೈಕ ಅರ್ಧಶತಕ ಸೇರಿದಂತೆ 20.44ರ ಸರಾಸರಿಯಲ್ಲಿ ಕೇವಲ 184 ರನ್ ಕಲೆಹಾಕಿದ್ದಾರೆ.

ಒಟ್ಟು 15 ಬಾರಿ ಶೂನ್ಯ ಸಂಪಾದನೆ

ರೋಹಿತ್ ಶರ್ಮಾ ನಾಯಕನಾಗಿ 10 ಬಾರಿ ಶೂನ್ಯಕ್ಕೆ ಔಟಾಗುವ ಜತೆಗೆ ಮತ್ತೊಂದು ಅನಗತ್ಯ ದಾಖಲೆಯನ್ನೂ ಮಾಡಿದ್ದಾರೆ. ಅವರು ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಕ್ರಿಕೆಟ್​​ ಆಗಿದ್ದಾರೆ. ಅವರು ಒಟ್ಟು 15 ಬಾರಿ ಸೊನ್ನೆ ಸುತ್ತಿದ್ದಾರೆ. ಸುನೀಲ್ ನರೈನ್ಕೆ, ಕೆಆರ್ ಬ್ಯಾಟರ್ ಮನದೀಪ್ ಸಿಂಗ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೊಹ್ಲಿಯೊಂದಿಗೆ ಅಗ್ರಸ್ಥಾನದಲ್ಲಿರುವ ಬ್ಯಾಟರ್​​ಗಳು.

ಮುಂಬಯಿ ಇಂಡಿಯನ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ ಟೂರ್ನಿಯಲ್ಲಿ ಸತತ ಎರಡು ಜಯ ದಾಖಲಿಸಿದೆ. ಆಡಿರುವ 9 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದೆ. ಒಟ್ಟು 10 ಅಂಕಗಳನ್ನು ಕಲೆ ಹಾಕುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 6 ನೇ ಸ್ಥಾನಕ್ಕೇರಿದೆ. ಮೇ 6 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ತನ್ನ ಮುಂದಿನ ಪಂದ್ಯವಾಡಲಿದೆ.

ಇದನ್ನೂ ಓದಿ : IPL 2023 : ಮೈದಾನದಲ್ಲಿ ಗಲಾಟೆ ಮಾಡಿದ ಕೊಹ್ಲಿ, ಗಂಭೀರ್​ಗೆ ಅಮಾನತು ಶಿಕ್ಷೆ ವಿಧಿಸಲು ಗವಾಸ್ಕರ್ ಸಲಹೆ

ಬುಧವಾರದ ಡಬಲ್​ಹೆಡರ್​​ನ ಎರಡನೇ ಪಂದ್ಯದಲ್ಲಿ ಮುಂಬಯಿ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ 214 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬೈ ಇಶಾನ್ ಕಿಶನ್​, ಸೂರ್ಯಕುಮಾರ್ ಯಾದವ್ ಅವರ ಅರ್ಧಶತಗಳ ನೆರವಿನಿಂದ 18.5 ಓವರ್​ಗಳಲ್ಲಿ 216 ರನ್ ಬಾರಿಸಿ ಗೆಲುವು ಸಾಧಿಸಿತು.

Exit mobile version