Site icon Vistara News

Viral News: ಅತ್ಯಾಚಾರ ಆರೋಪಿಗೆ ಆಟೋಗ್ರಾಫ್ ನೀಡಿದ ಕೊಹ್ಲಿ-ರೋಹಿತ್​ಗೆ ನೆಟ್ಟಿಗರಿಂದ ಕ್ಲಾಸ್​

Rohit Sharma signing autograph for Sandeep Lamichhane

ಬೆಂಗಳೂರು: ಏಷ್ಯಾಕಪ್​ ಟೂರ್ನಿಯ ಲೀಗ್​ ಪಂದ್ಯದಲ್ಲಿ ನೇಪಾಳ ತಂಡವನ್ನು ಮಣಿಸಿ ಭಾರತ ತಂಡ ಸೂಪರ್​-4 ಹಂತಕ್ಕೆ ಪ್ರವೇಶ ಪಡೆದಿತ್ತು. ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ನೇಪಾಳ ಆಟಗಾರರ ಡ್ರೆಸಿಂಗ್​ ರೂಮ್​ಗೆ ತೆರಳಿ ಉತ್ತಮ ಪ್ರದರ್ಶನ ತೋರಿದ ಆಟಗಾರರ ಕೊರಳಿಗೆ ಪದಕವನ್ನು ಹಾಕಿ ಗೌರವಿಸಿದ್ದರು. ಅಲ್ಲದೆ ಆಟಗಾರರಿಗೆ ಕ್ರಿಕೆಟ್​ ಸಲಹೆಗಳನ್ನು ನೀಡಿದ್ದರು. ಭಾರತೀಯ ಕ್ರಿಕೆಟಿಗರು ತೋರಿದ ಈ ನಡೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಅತ್ಯಾಚಾರ ಪ್ರಕರಣ ಎದುರಿಸಿದ್ದ ಸಂದೀಪ್​ ಲಾಮಿಚಾನೆಗೆ(Sandeep Lamichhane) ಕೊಹ್ಲಿ(virat kohli) ಮತ್ತು ರೋಹಿತ್(Rohit Sharma)​ ಆಟೋಗ್ರಾಫ್​ ನೀಡಿದಕ್ಕೆ ಉಭಯ ಆಟಗಾರರ ವಿರುದ್ಧ ನಟ್ಟಿಗರು ಕಿಡಿಕಾರಿದ್ದಾರೆ.

ಜೈಲು ಸೇರಿದ್ದ ಲಾಮಿಚಾನೆ

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ (Sexual Assault) ಎಸಗಿದ ಪ್ರಕರಣದಲ್ಲಿ ನೇಪಾಳದ ಕ್ರಿಕೆಟಿಗ ಸಂದೀಪ್​ ಲಾಮಿಚಾನೆ ಜೈಲು ಸೇರಿದ್ದರು. ಬಳಿಕ ಹೈಕೋರ್ಟ್​ನಿಂದ​ ಜಾಮೀನು ಪಡೆದು ಸದ್ಯ ಕ್ರಿಕೆಟ್​ ಆಡುತ್ತಿದ್ದಾರೆ. ಈಗಲೂ ಕೂಡ ಅವರು ಈ ಪ್ರಕರಣವನ್ನು ಎದುರಿಸುತ್ತಿದ್ದಾರೆ.

ಕಳೆದ ವರ್ಷ ಲಾಮಿಚಾನೆ ವೆಸ್ಟ್​ ಇಂಡೀಸ್​ನಲ್ಲಿ ನಡೆಯುವ ಕೆರಿಬಿಯನ್​ ಕ್ರಿಕೆಟ್​ ಲೀಗ್​ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರ ವಿರುದ್ಧ ಅತ್ಯಾಚಾರ ಎಸಗಿದ್ದರೆಂಬ ಆರೋಪ ಕೇಳಿ ಬಂದಿತ್ತು. ದೂರು ದಾಖಲಾದ ಬಳಿಕವೂ ಅವರು ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್​ ಜಾಮೀನುರಹಿತ ವಾರಂಟ್​ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಕೋರ್ಟ್​ಗೆ ಹಾಜರುಪಡಿಸಿದ್ದರು.

ಮೂರು ತಿಂಗಳು ಜೈಲುವಾಸ

ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳು ಅವರು ಜೈಲುವಾಸಕ್ಕೆ ಒಳಗಾಗಿದ್ದರು. ಇದಾದ ಬಳಿಕ ತಮಗೆ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಂದೀಪ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ಜಾಮೀನು ಪಡೆದುಕೊಂಡಿದ್ದರು.

ರೋಹಿತ್​-ಕೊಹ್ಲಿ ವಿರುದ್ಧ ನೆಟ್ಟಿಗರ ಆಕ್ರೋಶ

ನಾಯಕ ರೋಹಿತ್​ ಮತ್ತು ಕೊಹ್ಲಿ, ಲಾಮಿಚಾನೆಗೆ ಜೆರ್ಸಿ ಮೇಲೆ ತಮ್ಮ ಆಟೋಗ್ರಾಫ್​ ನೀಡಿದ ಫೋಟೊ ಕಂಡ ನೆಟ್ಟಿಗರು. ನೀವು ಇತರ ಆಟಗಾರರಿಗೆ ಆಟೋಗ್ರಾಫ್ ಸೇರಿ ಕೆಲ ಸ್ಮರಣಿಕೆಗಳನ್ನು ನೀಡಿದ್ದು ನಿಜಕ್ಕೂ ಸಂತಸವಿದೆ. ಆದರೆ ಅತ್ಯಾಚಾರ ಆರೋಪ ಹೊತ್ತಿರುವ ಲಾಮಿಚಾನೆಗೆ ಆಟೋಗ್ರಾಫ್ ನೀಡಿದ್ದು ಸರಿಯಲ್ಲ. ಇದು ಅತ್ಯಾಚಾರ ನಡೆಸಿದ ವ್ಯಕ್ತಿಗೆ ನೀವು ಕೂಡ ಬೆಂಬಲ ಸೂಚಿಸಿದಂತೆ, ನಿಮಗೆ ನಾಚಿಕೆಯಾಗಬೇಕು ಹೀಗೆ ಹಲವು ತೀಕ್ಷ್ಣ ಕಮೆಂಟ್​ಗಳ ಮೂಲಕ ರೋಹಿತ್​ ಮತ್ತು ಕೊಹ್ಲಿಯ ಈ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ 10 ವಿಕೆಟ್​ ಜಯ

ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಸೋಮವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆದ್ದ ​ನೇಪಾಳ ತಂಡ 48.2 ಓವರ್​ಗಳಲ್ಲಿ 230 ರನ್​ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಭಾರತ ಡಕ್ವರ್ತ್​ ಲೂಯಿಸ್​ ನಿಯಮದ ಪ್ರಕಾರ 20.1 ಓವರ್​ಗಳಲ್ಲಿ 147 ರನ್​ ಬಾರಿಸಿ ಗೆಲುವು ಕಂಡಿತ್ತು.

ಇದನ್ನೂ ಓದಿ Asia Cup 2023 : ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್​ ಸುಲಭ ಜಯ

ಸೆಪ್ಟೆಂಬರ್​ 10ಕ್ಕೆ ಭಾರತ ಪಾಕ್​ ಪಂದ್ಯ

ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾಕಪ್​ನ(Asia Cup 2023) ಮೊದಲ ಪಂದ್ಯ ಮಳೆಯಿಂದ ರದ್ದು ಗೊಂಡಿತ್ತು. ಇದರಿಂದ ಅಭಿಮಾನಿಗಳು ಈ ಪಂದ್ಯವನ್ನು ಕಣ್ತುಂಬಿಕೊಳ್ಳಲಾಗದ ಬೇಸರದಲ್ಲಿದ್ದರು. ಆದರೆ ಉಭಯ ದೇಶಗಳ ಅಭಿಮಾನಿಗಳಿಗೆ ಈ ಬಾರಿ ನಿರಾಸೆಯಾಗದು. ಇತ್ತಂಡಗಳ ಮಧ್ಯೆ ಮತ್ತೊಂದು ಪಂದ್ಯ ನಡೆಯಲಿದೆ. ಸೆಪ್ಟೆಂಬರ್​ 10ರಂದು ನಡೆಯುವ ಸೂಪರ್​-4 ಸುತ್ತಿನ (Pakistan vs India Super Fours Match)ಪಂದ್ಯದಲ್ಲಿ ಸೆಣಸಾಡಲಿದೆ. ಈ ಪಂದ್ಯಕ್ಕೆ ಮಳೆ ಸಾಧ್ಯತೆ ಕಡಿಮೆ ಇರುವ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ ಎಂದು ತಿಳಿದುಬಂದಿದೆ.

Exit mobile version