Site icon Vistara News

Rohit Sharma: ಕೆಜಿಎಫ್ ಶೈಲಿಯಂತೆ ಹೆಲಿಕಾಪ್ಟರ್​ನಲ್ಲಿ ಧರ್ಮಶಾಲಾಕ್ಕೆ ಬಂದಿಳಿದ ರೋಹಿತ್​; ವಿಡಿಯೊ ವೈರಲ್​

Rohit Sharma

ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್​ ನಡುವಣ ಅಂತಿಮ ಟೆಸ್ಟ್(IND vs ENG 5th Test)​ ಪಂದ್ಯ ಮಾರ್ಚ್​ 7ರಿಂದ ಆರಂಭಗೊಳ್ಳಲಿದೆ. 2 ದಿನಗಳ ಮೊದಲೇ ಉಭಯ ತಂಡಗಳ ಆಟಗಾರರು ಕೂಡ ಧರ್ಮಶಾಲಾ ತಲುಪಿದ್ದಾರೆ. ರೋಹಿತ್​ ಶರ್ಮ(Rohit Sharma) ಅವರು ಇಂದು(ಮಂಗಳವಾರ) ತಂಡವನ್ನು ಸೇರಿಕೊಂಡಿದ್ದಾರೆ. ಕೆಜಿಎಫ್ ಶೈಲಿಯಲ್ಲಿ ಯಶ್​ ಬಂದಂತೆ ರೋಹಿತ್​ ಅವರು ಖಾಸಗಿ ಹೆಲಿಕಾಪ್ಟರ್‌ ಮೂಲಕ ಧರ್ಮಶಾಲಾಕ್ಕೆ ಬಂದಿಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ರೋಹಿತ್​ ಶರ್ಮ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರಣ ತಡವಾಗಿ ತಂಡ ಸೇರಿದ್ದಾರೆ. ಅವರು ಹೆಲಿಕಾಪ್ಟರ್‌ ಮೂಲಕ ಬಂದಿರುವುದನ್ನು ಕಂಡು ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಈ ಖಾಸಗಿ ಹೆಲಿಕಾಪ್ಟರ್‌ ರೋಹಿತ್​ ಶರ್ಮ ಅವರದ್ದೋ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ಪಂದ್ಯ ನಡೆಯುವುದು ಅನುಮಾನ


ಪಂದ್ಯ ನಡೆಯುವ ಹಿಮಾಚಲ ಪ್ರದೇಶದ ಧರ್ಮಶಾಲಾ(Dharamshala)ದಲ್ಲಿ ಭಾರಿ ಮಂಜಿನ ಮತ್ತು ಮಳೆಯ ಸಮಸ್ಯೆ ಎದುರಾಗಿದೆ. ಪಂದ್ಯದ ಸಮಯದಲ್ಲಿ ತಾಪಮಾನವು 1 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಹೀಗಾಗಿ ಪಂದ್ಯ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

ಇಲ್ಲಿ ನಡೆಯುತ್ತಿರುವ 2 ಟೆಸ್ಟ್‌ ಪಂದ್ಯ ಇದಾಗಿದೆ. ಇಲ್ಲಿ ಮೊದಲ ಟೆಸ್ಟ್​ ನಡೆದದ್ದು 2017ರಲ್ಲಿ. ಭಾರತ-ಆಸ್ಟೇಲಿಯಾ ನಡುವೆ. ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿರುವುದರಿಂದ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್‌ ಬೌಲಿಂಗ್‌ ಸ್ವರ್ಗವೆನಿಸಿದೆ.

ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್‌ ಓವಲ್‌, ನ್ಯೂಲ್ಯಾಂಡ್ಸ್‌ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿದೆ.

ಈಗಾಗಲೇ ಸರಣಿಯನ್ನು 3-1 ಅಂತರದಿಂದ ಗೆದ್ದಿರುವ ಭಾರತ ತಂಡಕ್ಕೆ ಐಪಿಎಲ್​ ಟೂರ್ನಿಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯ ಎಂದರೂ ತಪ್ಪಾಗಲಾರದು. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ನಿಟ್ಟಿನಲ್ಲಿ ನೋಡುವುದಾದರೆ ಈ ಪಂದ್ಯ ಇತ್ತಂಡಗಳಿಗೂ ಮಹತ್ವದಾಗುತ್ತದೆ. ಏಕೆಂದರೆ ಫೈನಲ್​ ಪ್ರವೇಶ ಪಡೆಯಬೇಕಾದರೆ ಅಂಕಪಟ್ಟಿಯಲ್ಲಿ ಅಂತಿಮವಾಗಿ ಮೊದಲ ಎರಡು ಸ್ಥಾನ ಪಡೆಯಬೇಕಾಗುತ್ತದೆ.​

Exit mobile version