ಮುಂಬಯಿ: ಐಪಿಎಲ್ನ 16ನೇ ಅವೃತ್ತಿಯ ಪಂದ್ಯಗಳನ್ನು ಜಿಯೋ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಮಾಡುತ್ತಿದೆ. ಉಚಿತವಾಗಿ ಸೇವೆ ನೀಡಿರುವ ಕಾರಣ ಬಹುಬೇಗ ಗ್ರಾಹಕರ ಮನಮುಟ್ಟುತ್ತಿದೆ. ದಿನದಿಂದ ದಿನಕ್ಕೆ ಪಂದ್ಯಗಳ ವೀಕ್ಷಕರ ಸಂಖ್ಯೆ ಏರುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದ ಕೊನೇ ಹಂತದಲ್ಲಿ ಒಟ್ಟು 2.4 ಕೋಟಿ ಮಂದಿ ಏಕಕಾಲಕ್ಕೆ ಪಂದ್ಯ ವೀಕ್ಷಿಸುವ ಮೂಲಕ ಹೊಸ ದಾಖಲೆಯೂ ಸೃಷ್ಟಿಯಾಗಿತ್ತು. ಈ ಜನಪ್ರಿಯತೆಯನ್ನು ಇನ್ನುಷ್ಟು ಹಿಗ್ಗಿಸುವ ಉದ್ದೇಶದಿಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಜಿಯೋ ಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರು ಈ ಹಿಂದೆ ಐಪಿಎಲ್ ಪಂದ್ಯಗಳ ನೇರ ಪ್ರಸಾರದ ಹಕ್ಕು ಪಡೆದುಕೊಂಡಿದ್ದ ಸ್ಟಾರ್ ಸ್ಪೋರ್ಟ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದರು. ಐಪಿಎಲ್ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದರು. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್, ಕೆ. ಎಲ್ ರಾಹುಲ್ ಕೂಡ ಸ್ಟಾರ್ ಸ್ಪೋರ್ಟ್ಸ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಜಿಯೊ ಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವುದಕ್ಕೆ ರೋಹಿತ್ ಶರ್ಮಾ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ಡಿಜಿಟಲ್ ವೇದಿಕೆಯಲ್ಲಿ ವ್ಯಾಪಕಗೊಳಿಸುತ್ತಿರುವ ಜಿಯೊ ಸಿನಿಮಾ ಜತೆ ಕೈಜೋಡಿಸುವುದಕ್ಕೆ ಸಂತಸವಾಗುತ್ತಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಮೊಬೈಲ್ ಫೋನ್ ಹಾಗೂ ಕನೆಕ್ಟೆಡ್ ಟಿವಿ ಮೂಲಕ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಜಿಯೊ ಸಿನಿಮಾ ಕ್ರಿಕೆಟ್ ಪ್ರೇಮಿಗಳಿಗೆ ಅನುವು ಮಾಡಿಕೊಡುತ್ತಿದೆ. ಹಲವಾರು ಹೊಸ ಆಯ್ಕೆಗಳನ್ನೂ ಈ ವೇದಿಕೆಯಲ್ಲಿ ನೀಡಲಾಗುತ್ತಿದೆ. ಕ್ರಿಕೆಟ್ ವೀಕ್ಷಣೆಗೆ ಹೆಚ್ಚು ಅವಕಾಶಗಳು, ವೈಯುಕ್ತಿಕ ಆಯ್ಕೆಗಳು ಸೇರಿದಂತೆ ಕ್ರಿಕೆಟ್ ಪಂದ್ಯಗಳನ್ನು ಡಿಜಿಟಲ್ ವೇದಿಕೆಗೆ ತಂದಿರುವ ಜಿಯೊ ಸಿನಿಮಾ ಜತೆ ಕೈ ಜೋಡಿಸಲು ಸಂತಸವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಲಾಭದ ಹಾದಿಯಲ್ಲಿ ಜಿಯೊ ಸಿನಿಮಾ
ಡಿಜಿಟಲ್ ವೇದಿಕೆ ಮೂಲಕ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುಸವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ರಿಲಯನ್ಸ್ ಸಂಸ್ಥೆಯು ಐಪಿಎಲ್ ಪಂದ್ಯಗಳ ಡಿಜಿಟಲ್ ಪ್ರಸಾರದ ಹಕ್ಕನ್ನು ದೊಡ್ಡ ಮೊತ್ತವನ್ನು ಸಲ್ಲಿಸಿ ತನ್ನದಾಗಿಸಿಕೊಂಡಿತ್ತು. ಈ ಹೂಡಿಕೆ ವಿಚಾರದಲ್ಲಿ ರಿಲಯನ್ಸ್ ಸಂಸ್ಥೆಗೆ ಸಂಪೂರ್ಣ ಯಶಸ್ಸು ಸಿಕ್ಕಿದ್ದು ಜಿಯೊ ಸಿನಿಮಾದ ಮೂಲಕ ಐಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಏರುತ್ತಲೇ ಇದೆ. ಅಂತೆಯೇ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಜಿಯೊ ಸಿನಿಮಾ ಹಾಲಿ ಆವೃತ್ತಿಯಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಅದೇ ರೀತಿ ಜಿಯೊ ಸಿನಿಮಾ ಜಾಹೀರಾತುದಾರರನ್ನೂ ಆಕರ್ಷಿಸಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದ ವೇಳೆ ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ 2.4 ಕೋಟಿ ದಾಟಿದೆ. ಇದು ಪ್ರಸಕ್ತ ಐಪಿಎಲ್-2023ರ ಆವೃತ್ತಿಯ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಫ್ಲಾಟ್ಫಾರ್ಮ್ ಜಿಯೋಸಿನಿಮಾದಲ್ಲಿ ಇದುವರೆಗಿನ ಅತಿ ಹೆಚ್ಚು ವೀಕ್ಷಕರ ಸಂಖ್ಯೆ. ಈ ಹಿಂದೆ ಏಪ್ರಿಲ್ 12ರಂದು ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿತ್ತು. ಈ ಬಾರಿ ಆರ್ಸಿಬಿ-ಸಿಎಸ್ಕೆ ಪಂದ್ಯದ ಎರಡನೇ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಜಿಯೋಸಿನಿಮಾದ ವೀಕ್ಷಕರ ಸಂಖ್ಯೆ 24 ದಶಲಕ್ಷ ತಲುಪಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ರೋಚಕ ಪಂದ್ಯದಲ್ಲಿ ಎಂಎಸ್ಧೋನಿ ಸಾರಥ್ಯದ ಚೆನ್ನೈ ಸೂಪರ್ಕಿಂಗ್ಸ್ ತಂಡ 8 ರನ್ಗಳಿಂದ ಗೆದ್ದುಕೊಂಡಿತು. ಒಟ್ಟಾರೆ 444 ರನ್ಗಳ ಪ್ರವಾಹ ಹರಿದ ಈ ಪಂದ್ಯದಲ್ಲಿ ದಾಖಲೆಯ 33 ಸಿಕ್ಸರ್ಗಳೂ ಸಿಡಿದವು.
ಟಾಟಾ ಐಪಿಎಲ್-2023ರ ಆವೃತ್ತಿಯ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಬಿಸಿಸಿಐ ಪ್ರತ್ಯೇಕ ಕಂಪನಿಗಳಿಗೆ ನೀಡಿದೆ. ಈಗ ಡಿಜಿಟಲ್ ಪ್ರಸಾರ ವೇದಿಕೆ ಅದರ ನೇರ ಲಾಭವನ್ನು ಕಾಣುತ್ತಿದೆ. ಜಿಯೋಸಿನಿಮಾ ಈ ಬಾರಿ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರವನ್ನು ಮಾಡುತ್ತಿದೆ. ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಇದು ಹೆಚ್ಚಿನ ಸಹಾಯವನ್ನು ಮಾಡಿದೆ.
ಇದನ್ನೂ ಓದಿ : IPL 2023: ಗಂಗೂಲಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್‌ಫಾಲೋ ಮಾಡಿದ ವಿರಾಟ್ ಕೊಹ್ಲಿ!
2019ರ ಆವೃತ್ತಿಯ ಫೈನಲ್ ಪಂದ್ಯವನ್ನು ಡಿಸ್ನಿ-ಹಾಟ್ಸ್ಟಾರ್ನಲ್ಲಿ ಗರಿಷ್ಠ 1.86 ಕೋಟಿ ವೀಕ್ಷಕರು ನೋಡಿದ್ದರು. ಆದರೆ, ಜಿಯೋಸಿನಿಮಾದಲ್ಲಿ 2.4 ಕೋಟಿ ವೀಕ್ಷಕರ ಸಂಖ್ಯೆಯನ್ನು ಈಗಲೇ ದಾಟಿದೆ. ಪ್ರಸಕ್ತ ಐಪಿಎಲ್ ಟೂರ್ನಿ ಇನ್ನೂ ಲೀಗ್ ಹಂತದಲ್ಲಿದ್ದು, ಜಿಯೋಸಿನಿಮಾ ಈಗಾಗಲೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಐಪಿಎಲ್-2023 ಫೈನಲ್ ಹಂತದತ್ತ ಸಾಗುತ್ತಿರುವಂತೆ, ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆಯು ಹೊಸ ದಾಖಲೆ ಸೃಷ್ಟಿಸಲಿದೆ ತನ್ನ ಸ್ಟ್ರೀಮಿಂಗ್ ಅಪ್ಲಿಕೇಶನ್ ಮೂಲಕ ಪ್ರತಿದಿನ ಲಕ್ಷಾಂತರ ಹೊಸ ವೀಕ್ಷಕರು ಐಪಿಎಲ್ ಪಂದ್ಯವನ್ನು ನೋಡುತ್ತಿದ್ದಾರೆ.
ಪ್ರಾಯೋಜಕರು ಮತ್ತು ಜಾಹೀರಾತುದಾರರ ವಿಷಯದಲ್ಲಿಯೂ ಜಿಯೋಸಿನಿಮಾ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಅಗ್ರ ಜಾಗತಿಕ ಮತ್ತು ಭಾರತೀಯ ಬ್ರ್ಯಾಂಡ್ಗಳು ಈಗಾಗಲೆ ಜಿಯೋಸಿನಿಮಾದತ್ತ ಆಕರ್ಷಿತವಾಗಿವೆ. ಟಿವಿಯನ್ನು ಬಿಟ್ಟು, ಜಿಯೋಸಿನಿಮಾ ಕೂಡ 23 ಪ್ರಮುಖ ಪ್ರಾಯೋಜಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.