ನ್ಯೂಯಾರ್ಕ್: ಐರ್ಲೆಂಡ್ ವಿರುದ್ಧ ಬುಧವಾರ ನಡೆದ ಟಿ20 ವಿಶ್ವಕಪ್(T20 World Cup 2024) ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ(Rohit Sharma) ಅವರು ಅರ್ಧಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರ ದಾಖಲೆಯ ಪಟ್ಟಿ ಇಂತಿದೆ.
600 ಸಿಕ್ಸರ್
ಐರ್ಲೆಂಡ್ ವಿರುದ್ಧ ಮೂರು ಸಿಕ್ಸರ್ಗಳನ್ನು ಬಾರಿಸುವ ಮೂಲಕ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600 (ಏಕದಿನದಲ್ಲಿ 323, ಟಿ20ಯಲ್ಲಿ 193, ಟೆಸ್ಟ್ನಲ್ಲಿ 84) ಸಿಕ್ಸರ್ ಪೂರೈಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಕ್ರಿಸ್ ಗೇಲ್ 553 ಸಿಕ್ಸರ್, ಶಾಹೀದ್ ಅಫ್ರೀದಿ 476 ಸಿಕ್ಸರ್ ಬಾರಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
4 ಸಾವಿರ ರನ್
ಟಿ20 ಕ್ರಿಕೆಟ್ನಲ್ಲಿ 4 ಸಾವಿರ ರನ್ ಪೂರೈಸಿದ ದಾಖಲೆಯನ್ನು ಕೂಡ ರೋಹಿತ್(4026) ತಮ್ಮ ಹೆಸರಿಗೆ ಬರೆದರು. ಈ ಸಾಧನೆ ಮಾಡಿದ ವಿಶ್ವದ ದ್ವಿತೀಯ ಬ್ಯಾಟರ್ ಎನಿಸಿಕೊಂಡರು. ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 4038 ರನ್ ಬಾರಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ(4023) ಮೂರನೇ ಸ್ಥಾನದಲ್ಲಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಸಾವಿರ ರನ್
ಅರ್ಧಶತಕ ಬಾರಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್(1015) ಸಾವಿರ ರನ್ ಪೂರೈಸಿದರು. ಈ ಸಾಧನೆ ಮಾಡಿದ ಮೂರನೇ ಹಾಗೂ 2ನೇ ಭಾರತೀಯ ಎನಿಸಿಕೊಂಡರು. ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(1142) ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(1016) ದ್ವಿತೀಯ ಸ್ಥಾನದಲ್ಲಿದ್ದಾರೆ. ರೋಹಿತ್ ಮುಂದಿನ ಪಂದ್ಯದಲ್ಲಿ 2 ರನ್ ಗಳಿಸಿದರೆ ಜಯವರ್ಧನೆ ದಾಖಲೆ ಪತನಗೊಳ್ಳಲಿದೆ.
ಇದನ್ನೂ ಓದಿ India vs Ireland: ರೋಹಿತ್ ಅರ್ಧಶತಕ; ಐರ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ಮೊದಲ ಅರ್ಧಶತಕ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅರ್ಧಶತಕ ಬಾರಿಸಿದ ಮೊದಲ ಟೀಮ್ ಇಂಡಿಯಾ ನಾಯಕ ಎನ್ನುವ ಹಿರಿಮೆಗೂ ರೋಹಿತ್ ಪಾತ್ರರಾದರು. ಐರ್ಲೆಂಡ್ ವಿರುದ್ಧ ರೋಹಿತ್ 3 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿ 52 ರನ್ ಗಳಿಸಿದರು. ಇದು ಮಾತ್ರವಲ್ಲದೆ ರೋಹಿತ್ ನಾಯಕತ್ವದಲ್ಲಿ ಭಾರತ ಅತಿ ಹೆಚ್ಚು ಟಿ20 ಪಂದ್ಯ ಗೆದ್ದ ದಾಖಲೆ ಬರೆಯಿತು.
ಪಂದ್ಯ ಗೆದ್ದ ಭಾರತ
ಹಾರ್ದಿಕ್ ಪಾಂಡ್ಯ(3), ಜಸ್ಪ್ರೀತ್ ಬುಮ್ರಾ(2) ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್ ದಾಳಿ, ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಐರ್ಲೆಂಡ್(India vs Ireland) ವಿರುದ್ಧ 8 ವಿಕೆಟ್ಗಳ ಗೆಲುವು ಸಾಧಿಸಿತು. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2024 ಶುಭಾರಂಭ ಕಂಡಿದೆ. ಭಾರತ ತನ್ನ ದ್ವಿತೀಯ ಪಂದ್ಯವನ್ನು ಜೂನ್ 9 ರಂದು ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಇತ್ತಂಡಗಳ ಈ ಹೈವೋಲ್ಟೇಜ್ ಪಂದ್ಯ ಕೂಡ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ.
ಇಲ್ಲಿನ ನಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ಅವರ ಆಯ್ಕೆಯನ್ನು ಬೌಲರ್ಗಳು ಸಮರ್ಥಿಸಿಕೊಂಡರು. ಹಾರ್ದಿಕ್ ಪಾಂಡ್ಯ, ಅರ್ಶದೀಪ್, ಜಸ್ಪ್ರೀತ್ ಬುಮ್ರಾ, ಸಿರಾಜ್ ಮತ್ತು ಅಕ್ಷರ್ ಜಿದ್ದಿಗೆ ಬಿದ್ದವರಂತೆ ಬೌಲಿಂಗ್ ದಾಳಿ ನಡೆಸಿ ವಿಕೆಟ್ ಕಿತ್ತು ಪಾರಮ್ಯ ಮೆರೆದರು. ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಐರ್ಲೆಂಡ್ ಕೇವಲ 96 ರನ್ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಭಾರತ, ಈ ಸಣ್ಣ ಮೊತ್ತವನ್ನು 12.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 97 ರನ್ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.