Site icon Vistara News

ICC World Cup 2023 : ಫೈನಲ್ ಸೋಲಿನ ಬಳಿಕ ಕಣ್ಣೀರಿಟ್ಟ ನಾಯಕ ರೋಹಿತ್​, ಮೊಹಮ್ಮದ್ ಸಿರಾಜ್​

Team india

ಅಹಮದಾಬಾದ್​: ಭಾರತ ಕ್ರಿಕೆಟ್​ ತಂಡದ ವಿಶ್ವ ಕಪ್​ (ICC World Cup 2023) ಗೆಲ್ಲುವ ಆಸೆ ಭಗ್ನಗೊಂಡಿದೆ. 2023ರ ವಿಶ್ವ ಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ 6 ವಿಕೆಟ್​ ಸೋಲು ಕಂಡಿರುವ ಭಾರತ ಐಸಿಸಿ ಟ್ರೋಫಿಯ ಗೆಲ್ಲುವ ಆಸೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದೂಡಿಕೆ ಮಾಡುವಂತಾಗಿದೆ. ಫೈನಲ್ ಪಂದ್ಯದಲ್ಲಿ ಭಾರತ ತಂಡ ಅತ್ಯಂತ ನಿರಾಸೆಯ ಪ್ರದರ್ಶನ ನೀಡಿತು. ಟೂರ್ನಿಯುದ್ಧಕ್ಕೂ ಹುಲಿಗಳಂತೆ ಆಡಿದ್ದ ಭಾರತ ತಂಡದ ಆಟಗಾರರು ಕೊನೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಅಂತೆಯೇ ಪಂದ್ಯ ಮುಕ್ತಾಯಗೊಂಡ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್​ ಮೊಹಮ್ಮದ್ ಸಿರಾಜ್​ ಕಣ್ಣಿರು ಹಾಕಿದರು.

ಪಂದ್ಯದಲ್ಲಿ ಸೋಲುತ್ತಿದ್ದಂತೆ ಭಾರತ ತಂಡದ ಆಟಗಾರರು ನಿರಾಸೆ ಅನುಭವಿಸಿದರು.ಸೋಲಿನ ಸೂಚನೆ ಸಿಕ್ಕಿದ್ದ ಕಾರಣ ಬಹುತೇಕ ಆಸ್ಟ್ರೇಲಿಯಾ ತಂಡ ಗೆಲುವಿನ ರನ್ ಬಾರಿಸುವ ತನಕ ದುಃಖ ಅನುಭವಿಸಿದರು. ಆದರೆ, ಒಂದು ಬಾರಿ ಸೋಲು ಎದುರಾದ ತಕ್ಷಣ ಎಲ್ಲರ ದುಃಖದ ಕಟ್ಟೆಯೊಡೆಯಿತು. ಸಿರಾಜ್ ಅಳಲು ಆರಂಭಿಸಿದರೆ ಜಸ್​ಪ್ರಿತ್ ಬುಮ್ರಾ ಅವರನ್ನು ಸಮಾಧಾನ ಮಾಡಿದರು. ರೋಹಿತ್ ಶರ್ಮಾ ಕಣ್ಣೀರು ಸುರಿಸುತ್ತಾ ಬಗ್ಗಿ ಹೊರನಡೆದರು.

ವಿರಾಟ್​ ಕೊಹ್ಲಿಯೂ ಟೋಪಿಯನ್ನು ಮುಖಕ್ಕೆ ಮುಚ್ಚಿಕೊಂಡು ಹೊರಕ್ಕೆ ಹೋದರು. ಉಳಿದ ಆಟಗಾರರೂ ಅವರನ್ನು ಹಿಂಬಾಲಿಸಿದರು.

ಸಮಾಧಾನ ಮಾಡಿದ ಸಚಿನ್​

ಸೋಲಿನ ಬಳಿಕ ಭಾರತ ತಂಡದ ಆಟಗಾರರು ಮೈದಾನದಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರೆಲ್ಲರನ್ನೂ ಸಮಾಧಾನ ಮಾಡಿದರು. ಐಪಿಎಲ್​ ಮುಖ್ಯಸ್ಥ ರಾಜೀವ್ ಶುಕ್ಲಾ ಸೇರಿದಂತೆ ಎಲ್ಲರೂ ಭಾರತ ತಂಡದ ಆಟಗಾರರಿಗೆ ಸಮಾಧಾನ ಹೇಳಿದರು.

ಇದನ್ನೂ ಓದಿ : KL Rahul : ಕೋಚ್​ ರಾಹುಲ್​ ದಾಖಲೆ ಮುರಿದ ಕೆ. ಎಲ್ ರಾಹುಲ್​!

ಪಂದ್ಯದಲ್ಲಿ ಏನಾಯಿತು?

ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಕಪ್​ ಗೆಲ್ಲುವ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

ಸೋಲಿನೊಂದಿಗೆ ಭಾರತ ತಂಡದ ಐಸಿಸಿ ಟ್ರೋಫಿ ಬರ ಮುಂದುವರಿಯಿತು. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ವಿಶ್ವ ಕಪ್​​ ಕೊಡುಗೆ ಕೊಡುಗೆ ನೀಡುವ ಅಭಿಲಾಷೆಯೂ ಇಲ್ಲವಾಯಿತು. ಇದು ಆಸ್ಟ್ರೇಲಿಯಾ ತಂಡದ ಪಾಲಿಗೆ 6ನೇ ವಿಶ್ವ ಕಪ್​. ಆ ತಂಡ ಈ ಹಿಂದೆ 1987, 1999, 2003, 2007, 2015ರಲ್ಲಿ ಏಕ ದಿನ ವಿಶ್ವ ಕಪ್ ಗೆದ್ದಿತ್ತು. ಇದೀಗ ಮತ್ತೊಂದು ಟ್ರೋಫಿ ಆ ತಂಡಕ್ಕೆ ಸೇರ್ಪಡೆಯಾಗಿದ್ದು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿತು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ನಿರಾಯಾಸ ವಿಜಯ ಕಂಡಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್​​ ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಫೈನಲ್​ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣ ಪಾರಮ್ಯ ಸಾಧಿಸಿತು. ಆರಂಭದಲ್ಲಿ ಬೌಲಿಂಗ್​ನಲ್ಲಿ ಮೇಲುಗೈ ಸಾಧಿಸಿದ ಆಸೀಸ್ ಪಡೆ ಬಳಿಕ ಬ್ಯಾಟಿಂಗ್​ನಲ್ಲಿ ಮೇಲುಗೈ ಸಾಧಿಸಿತು. ಅತ್ಯಂತ ಸುಲಭ ಜಯ ತನ್ನದಾಗಿಸಿಕೊಂಡಿತು. ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡ ಸತತವಾಗಿ 10 ಪಂದ್ಯಗಳನ್ನು ಗೆದ್ದು ಫೈನಲ್​ಗೆ ಬಂದಿತ್ತು. ಆದರೆ, 11ನೇ ಪಂದ್ಯದಲ್ಲಿ ಸೋತಿತು. ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದಿದ್ದರೆ ಭಾರತ ತಂಡ ವಿಶ್ವ ಕಪ್ ಆವೃತ್ತಿಯಲ್ಲಿ ಸತತವಾಗಿ 11 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡದ ದಾಖಲೆಯನ್ನು ಸರಿಗಟ್ಟಬಹುದಾಗಿತ್ತು.

ಆರಂಭದಲ್ಲಿ ವಿಕೆಟ್ ಪತನ

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡ 47 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು. ವಾರ್ನರ್​ 7 ರನ್, ಮಿಚೆಲ್ ಮಾರ್ಷ್​ 15 ಹಾಗೂ ಸ್ಟೀವ್ ಸ್ಮಿತ್​​ 4 ರನ್ ಬಾರಿಸಿದರು. ಆದರೆ, ಟ್ರಾವಿಸ್ ಹೆಡ್​ ಹಾಗೂ ಮರ್ನಸ್​ ಲಾಬುಶೇನ್​ (58) ನಾಲ್ಕನೇ ವಿಕೆಟ್​ಗೆ 192 ರನ್​ ಬಾರಿಸಿದರು. ಅದು ಭಾರತ ತಂಡದ ಪಾಲಿಗೆ ಮುಳುವಾಯಿತು. ಟಾಸ್​ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಇಬ್ಬನಿ ಪರಿಣಾಮವನ್ನು ಬಳಸಿಕೊಳ್ಳುವ ಸೂಚನೆ ನೀಡಿದ್ದರು. ಅಂತೆಯೇ ಅವರು ಅದನ್ನು ಸಾಧಿಸಿ ತೋರಿಸಿದ್ದಾರೆ.

Exit mobile version