ಕೊಲಂಬೊ: 16ನೇ ಆವೃತ್ತಿಯ ಏಷ್ಯಾಕಪ್(Asia Cup) ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ(India vs Sri Lanka, Final) ನಡುವೆ ಇಂದು ಫೈನಲ್ ಹಣಾಹಣಿ ನಡೆಯಲಿದೆ. ಇಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದರೆ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರು ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ(MS Dhoni) ಮತ್ತು ಮೊಹಮ್ಮದ್ ಅಜರುದ್ದೀನ್(Mohammad Azharuddin) ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಮೊಹಮ್ಮದ್ ಅಜರುದ್ದೀನ್(1990-91, 1995) ಮತ್ತು ಮಹೇಂದ್ರ ಸಿಂಗ್ ಧೋನಿ(2010, 2016) ಭಾರತಕ್ಕೆ ತಲಾ 2 ಏಷ್ಯಾಕಪ್ ಗೆದ್ದುಕೊಟ್ಟ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮ ಅವರು ಈ ಬಾರಿ ಕಪ್ ಗೆದ್ದರೆ ಈ ದಾಖಲೆಯನ್ನು ಸರಿಗಟ್ಟಲಿದ್ದಾರೆ. 2018ರಲ್ಲಿ ರೋಹಿತ್ ಅವರ ನಾಯಕತ್ವದಲ್ಲಿ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾವನ್ನು ಮಣಿಸಿ ಕಪ್ ಗೆದ್ದಿತ್ತು. ಈ ಬಾರಿ ಗೆದ್ದರೆ ಅವರು ಕೂಡ 2 ಏಷ್ಯಾಕಪ್ ಗೆದ್ದ ನಾಯಕ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.
250ನೇ ಪಂದ್ಯ
ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮ ಕಣಕ್ಕಿಳಿಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ನೂತನ ಮೈಲಿಗಲ್ಲೊಂದನ್ನು ನಿರ್ಮಿಸಲಿದ್ದಾರೆ. ರೋಹಿತ್ ಶರ್ಮಗೆ ಇದು 250ನೇ ಏಕದಿನ ಪಂದ್ಯವಾಗಿದೆ. ಈ ಸಾಧನೆ ಮಾಡಿದ 9ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ರೋಹಿತ್ ಪಾಕಿಸ್ತಾನ ಮತ್ತು ಲಂಕಾ ವಿರುದ್ಧ ಸತತ ಅರ್ಧಶತಕ ಬಾರಿಸಿ ಮಿಂ.ಚಿದ್ದರು. ಅಲ್ಲದೆ ಅತಿ ವೇಗವಾಗಿ ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿ ಸಚಿನ್ ದಾಖಲೆಯನ್ನು ಹಿಂದಿಕ್ಕಿದ್ದರು.
ಇದನ್ನೂ ಓದಿ Viral Video: ಫೈನಲ್ ಪಂದ್ಯಕ್ಕೂ ಮುನ್ನ ತಂಡದ ಸ್ಟಾರ್ ಆಟಗಾರನಿಗೆ ಹುಚ್ಚ ಎಂದು ಬೈದ ರೋಹಿತ್ ಶರ್ಮ
32 ರನ್ ಬಾರಿಸಿದರೆ ಸಚಿನ್ ದಾಖಲೆ ಉಡೀಸ್
ಸಚಿನ್ ಬಳಿಕ ಏಷ್ಯಾಕಪ್ನಲ್ಲಿ ಹೆಚ್ಚು ರನ್ಗಳಿಸಿದ ಭಾರತೀಯ ಆಟಗಾರರ ಪೈಕಿ ರೋಹಿತ್ ಶರ್ಮ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೋಹಿತ್ ಫೈನಲ್ ಪಂದ್ಯದಲ್ಲಿ ಕೇವಲ 32 ರನ್ ಗಳಿಸಿದರೆ ಸಚಿನ್ ಅವರ ದಾಖಲೆ ಪತನಗೊಳ್ಳಲಿದೆ. ರೋಹಿತ್ ಸದ್ಯ 27* ಪಂದ್ಯಗಳಿಂದ 46.95 ಸರಾಸರಿಯಲ್ಲಿ 939* ರನ್ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 23 ಪಂದ್ಯಗಳನ್ನು ಆಡಿ 971 ರನ್ ಬಾರಿಸಿದ್ದಾರೆ.
ಸದ್ಯ 249 ಏಕದಿನ ಪಂದ್ಯಗಳನ್ನು ಆಡಿದ್ದು 10031* ರನ್ ಬಾರಿಸಿದ್ದಾರೆ. ಇದರಲ್ಲಿ 30 ಶತಕ ಮತ್ತು 3 ದ್ವಿಶತಕ ಮತ್ತು 51 ಅರ್ಧಶತಕಗಳು ಒಳಗೊಂಡಿದೆ. ಏಕದಿನದಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಏಕೈಕ ಆಟಗಾರ ಎಂಬ ಹಿರಿಮೆಯೂ ರೋಹಿತ್ ಪಾಲಿಗಿದೆ. 264 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಭಾರತವೇ ಫೇವರಿಟ್
ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಯುಎಇಯಲ್ಲಿ ನಡೆದ 1984ರ ಚೊಚ್ಚಲ ಏಷ್ಯಾ ಕಪ್ ಗೆದ್ದ ಹಿರಿಮೆ ಭಾರತದದ್ದು. ಭಾರತಕ್ಕೆ ಮೊದಲ ಏಷ್ಯಾ ಕಪ್ ಗೆದ್ದು ಕೊಟ್ಟ ಖ್ಯಾತಿ ಸುನೀಲ್ ಗಾವಸ್ಕರ್‌ಗೆ ಸಲ್ಲುತ್ತದೆ. ಅವರ ನಾಯಕತ್ವದಿಂದ ಆರಂಭವಾದ ಪಯಣದಲ್ಲಿ ಭಾರತ ಇದುವರೆಗೆ 10 ಸಲ ಫೈನಲ್‌ಗೆ ಲಗ್ಗೆಯಿಟ್ಟು ಅತ್ಯಧಿಕ 7 ಸಲ ಪ್ರಶಸ್ತಿಯನ್ನೆತ್ತಿದೆ. ಈ ಬಾರಿಯೂ ಭಾರತ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಭಾರತ ಹೊರತುಪಡಿಸಿದರೆ ಏಷ್ಯಾ ಕಪ್ ಇತಿಹಾಸದ ಮತ್ತೊಂದು ಯಶಸ್ವಿ ತಂಡವೆಂದರೆ ಶ್ರೀಲಂಕಾ. ಅದು ಅತ್ಯಧಿಕ 12 ಸಲ ಫೈನಲ್‌ಗೆ ಲಗ್ಗೆ ಇರಿಸಿ 6 ಸಲ ಪ್ರಶಸ್ತಿ ಎತ್ತಿದೆ. ಕಳೆದ ವರ್ಷ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು.