ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶೂನ್ಯ ಸುತ್ತಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma), ಬುಧವಾರ ನಡೆಯುವ ಆಫ್ಘನ್(India vs Afghanistan) ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳುವ ಇರಾದೆಯಲ್ಲಿದ್ದಾರೆ. ಅವರು ಈ ಪಂದ್ಯದಲ್ಲಿ ಮೂರು ಸಿಕ್ಸರ್ ಚಚ್ಚಿದರೆ ವಿಶ್ವ ದಾಖಲೆಯೊಂದನ್ನು ಬರೆಯಲಿದ್ದಾರೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಮೂರು ಸಿಕ್ಸರ್ ಅಗತ್ಯ
ಸದ್ಯ ರೋಹಿತ್ ಶರ್ಮ ಅವರು 551 ಸಿಕ್ಸರ್ ಬಾರಿಸಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಂಡೀಸ್ನ ಮಾಜಿ ಆಟಗಾರ ಕ್ರಿಸ್ ಗೇಲ್ 553 ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಆಫ್ಘನ್ ವಿರುದ್ಧ ಮೂರು ಸಿಕ್ಸರ್ ಸಿಡಿಸಿದರೆ ಯುನಿವರ್ಸ್ ಬಾಸ್ ಖ್ಯಾತಿಯ ಗೇಲ್ ದಾಖಲೆ ಪತನಗೊಳ್ಳಲಿದೆ.
ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದ ಉಳಿದ ಟಾಪ್ 5 ಆಟಗಾರರೆಂದರೆ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ (476) ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ದಿಗ್ಗಜ ಆಟಗಾರ ಬ್ರೆಂಡನ್ ಮೆಕಲಮ್ (398) ನಾಲ್ಕನೇ ಸ್ಥಾನದಲ್ಲಿದ್ದಾರೆ. ಮತೊಬ್ಬ ಕಿವೀಸ್ ಆಟಗಾರ ಮಾರ್ಟಿನ್ ಗಪ್ಟಿಲ್ 383 ಸಿಕ್ಸರ್’ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ India vs Afghanistan: ಆಫ್ಘನ್ ಮೇಲೆ ಸವಾರಿ ಮಾಡಲು ರೋಹಿತ್ ಪಡೆ ಸಜ್ಜು
ವಿಶ್ವಕಪ್ ಅತ್ಯಧಿಕ ಶತಕ
ರೋಹಿತ್ ಶರ್ಮ ಅವರು ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು 2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ 5 ಶತಕ ಬಾರಿಸಿದ್ದರು. ಈ ಮೂಲಕ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲಯನ್ನು ಮುರಿದಿದ್ದರು. ರೋಹಿತ್ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಗಳಿಸಿದ್ದರು.
ಸಚಿನ್ ದಾಖಲೆ ಮೇಲೆ ಕಣ್ಣು
ವಿಶ್ವಕಪ್ನಲ್ಲಿ ರೋಹಿತ್ ಒಟ್ಟು ರೋಹಿತ್ 6 ಶತಕ ಬಾರಿಸಿದ್ದಾರೆ. 2019 ರಲ್ಲಿ 5, 2015 ವಿಶ್ವಕಪ್ನಲ್ಲಿ ಒಂದು ಶತಕ ಬಾರಿಸಿದ್ದರು. ಈ ಬಾರಿಯೂ ಕೆಲವು ಶತಕದ ನಿರೀಕ್ಷೆ ಮಾಡಲಾಗಿದೆ. ಒಂದು ಶತಕ ಬಾರಿಸಿದರೆ ಸಚಿನ್ ತೆಂಡೂಲ್ಕರ್ ಸಾರ್ವಕಾಲಿ ದಾಖಲೆ ಪತನಗೊಳ್ಳಲಿದೆ. ಸದ್ಯ ರೋಹಿತ್ ಮತ್ತು ಸಚಿನ್ 6 ಶತಕ ದಾಖಲಿಸಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಮುಖಾಮುಖಿ
ಭಾರತ ಮತ್ತು ಅಫಘಾನಿಸ್ತಾನ ತಂಡಗಳು ಇದುವರೆಗೆ ವಿಶ್ವಕಪ್ನಲ್ಲಿ ಒಂದು ಬಾರಿ ಮಾತ್ರ ಮುಖಾಮುಖಿಯಾಗಿವೆ. ಇದು ಕಳೆದ 2019ರಲ್ಲಿ ಲಂಡನ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಈ ಪಂದ್ಯದಲ್ಲಿ ಭಾರತ ಅತ್ಯಂತ ಕಷ್ಟಪಟ್ಟು ಗೆಲುವು ಸಾಧಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 8 ವಿಕೆಟ್ಗೆ 224 ರನ್ ಬಾರಿಸಿತ್ತು, ಈ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಆಫ್ಘನ್ 213 ರನ್ ಬಾರಿಸಲಷ್ಟೇ ಶಕ್ತವಾಗಿ ಕೇವಲ 11 ರನ್ಗಳ ಅಂತರದಿಂದ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರು ಹ್ಯಾಟ್ರಿಕ್ ವಿಕೆಟ್ ಕಿತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.