ಪ್ರೊವಿಡೆನ್ಸ್: ಟೀಮ್ ಇಂಡಿಯಾದ ನಾಯಕ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ(T20 World Cup) ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ಶ್ರೀಲಂಕಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಲ ಜಯವರ್ಧನೆ(Mahela Jayawardene) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ಇಲ್ಲಿನ ಪ್ರೊವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್(IND vs ENG semifinal) ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ರೋಹಿತ್ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್ ಕ್ರಿಕೆಟ್ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಹೆಸರಿನಲ್ಲಿತ್ತು. ಜಯವರ್ಧನೆ 111 ಬೌಂಡರಿ ಬಾರಿಸಿದ್ದರು. ಈ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ರೋಹಿತ್ ಅವರ ಬೌಂಡರಿಗಳ ಸಂಖ್ಯೆ 91 ಇತ್ತು. ಸದ್ಯ ರೋಹಿತ್ 26 ಎಸೆತಗಳಿಂದ 37 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಳೆಯಿಂದಾಗಿ ಪಂದ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ.
ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಬ್ಯಾಟರ್ಗಳು
ಆಟಗಾರ | ದೇಶ | ಇನಿಂಗ್ಸ್ | ಬೌಂಡರಿ |
ರೋಹಿತ್ ಶರ್ಮ | ಭಾರತ | 46 | 113* |
ಮಹೇಲಾ ಜಯವರ್ಧನೆ | ಶ್ರೀಲಂಕಾ | 31 | 111 |
ವಿರಾಟ್ ಕೊಹ್ಲಿ | ಭಾರತ | 33 | 105 |
ಡೇವಿಡ್ ವಾರ್ನರ್ | ಆಸ್ಟ್ರೇಲಿಯಾ | 41 | 101 |
ತಿಲಕರತ್ನೆ ದಿಲ್ಶನ್ | ಶ್ರೀಲಂಕಾ | 35 | 101 |
ಜಾಸ್ ಬಟ್ಲರ್ | ಇಂಗ್ಲೆಂಡ್ | 34 | 87* |
ಕ್ರಿಸ್ ಗೇಲ್ | ವೆಸ್ಟ್ ಇಂಡೀಸ್ | 31 | 78 |
ಶಕೀಬ್ ಅಲ್ ಹಸನ್ | ಬಾಂಗ್ಲಾದೇಶ | 43 | 74* |
ಕೇನ್ ವಿಲಿಯಮ್ಸನ್ | ನ್ಯೂಜಿಲ್ಯಾಂಡ್ | 29 | 71* |
ಬ್ರೆಂಡನ್ ಮೆಕಲಮ್ | ನ್ಯೂಜಿಲ್ಯಾಂಡ್ | 25 | 67 |
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಸದ್ಯ 8 ಓವರ್ಗೆ 2 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿದೆ. ರೋಹಿತ್ ಮತ್ತು ಸೂರ್ಯಕುಮಾರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿರಾಟ್ ಕೊಹ್ಲಿ 9 ರನ್ಗೆ ವಿಕೆಟ್ ಕಳೆದುಕೊಂಡು ಈ ಪಂದ್ಯದಲ್ಲಿಯೂ ಘೋರ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಪಂತ್ ಆಟ 4 ರನ್ಗೆ ಕೊನೆಗೊಂಡಿತು.
ಇದನ್ನೂ ಓದಿ IND vs ENG: ಸೆಮಿ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ನಾಯಕ
2014, 2016, 2022ರಲ್ಲಿ ಭಾರತ ಆಡಿದ ಎಲ್ಲ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಥಶತಕ ಬಾರಿಸಿ ಮಿಂಚಿದ್ದರು. ಆದರೆ, ಈ ಬಾರಿ ಒಂದಂಕಿಗೆ ಸೀಮಿತರಾದರು. ಜತೆಗೆ ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಕಂಡಂತಾಯಿತು. ಇಂಗ್ಲೆಂಡ್ ವಿರುದ್ಧ 9 ಎಸೆತಗಳಲ್ಲಿ 9 ರನ್ ಬಾರಿಸಿ ಟಾಪ್ಲಿ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ವಿಕೆಟ್ ಕಳೆದುಕೊಂಡು ಡಗೌಟ್ನಲ್ಲಿ ಹತಾಶರಾಗಿ ಕುಳಿತಿದ್ದ ವಿರಾಟ್ ಕೊಹ್ಲಿಯನ್ನು ಕೋಚ್ ರಾಹುಲ್ ದ್ರಾವಿಡ್ ಬಂದು ಸಮಾಧಾನ ಪಡಿಸಿದರು. ಈ ವಿಡಿಯೊವೊಂದು ವೈರಲ್ ಆಗಿದೆ.