Site icon Vistara News

Rohit Sharma: ವಿಶೇಷ ದಾಖಲೆ ಬರೆಯಲು ಸಿದ್ಧರಾದ ರೋಹಿತ್​ ಶರ್ಮ

Rohit Sharma

ಲಕ್ನೋ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಇಂದಿನ ಇಂಗ್ಲೆಂಡ್(IND vs ENG)​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶೇಷ ಮೈಲಿಗಲ್ಲೊಂದನ್ನು ತಲುಪಲಿದ್ದಾರೆ. ನಾಯಕನಾಗಿ 100ನೇ ಪಂದ್ಯವನ್ನು ಮುನ್ನಡೆಸಿದ ದಾಖಲೆ ಬರೆಯಲಿದ್ದಾರೆ.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ರೋಹಿತ್​ ಅವರು ಮೈದಾನಕ್ಕಿಳಿಯುತ್ತಿದಂತೆ ಈ ದಾಖಲೆ ಬರೆಯಲಿದ್ದಾರೆ. ಹೀಗಾಗಿ ರೋಹಿತ್​ ಅವರಿಗೆ ಇಂದಿನ ಪಂದ್ಯ ವಿಶೇಷವಾಗಿದೆ. 36 ವರ್ಷದ ರೋಹಿತ್​ ಅವರು ಇದುವರೆಗೆ ಒಂಬತ್ತು ಟೆಸ್ಟ್, 39 ಏಕದಿನ ಮತ್ತು 51 ಟ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ರೋಹಿತ್ ಅವರು ಮೊದಲ ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು 2017ರಲ್ಲಿ ವಿರಾಟ್​ ಅವರ ಅನುಪಸ್ಥಿತಿಯಲ್ಲಿ ಅಂದು ತಂಡವನ್ನು ಮುನ್ನಡೆಸಿದ್ದರು. 99 ಪಂದ್ಯಗಳ ಪೈಕಿ 73 ಗೆಲುವು ಮತ್ತು 23 ಸೋಲು ಎದುರಾಗಿದೆ.

7ನೇ ನಾಯಕ

ರೋಹಿತ್​ ಇಂಗ್ಲೆಂಡ್​ ವಿರುದ್ಧ ಕಣಕಿಯುವ ಮೂಲಕ 100ನೇ ಪಂದ್ಯವನ್ನು ಮುನ್ನಡೆಸಿದ 7ನೇ ಭಾರತೀಯ ನಾಯಕ ಎನಿಸಿಕೊಳ್ಳಲಿದ್ದಾರೆ. ಅತಿ ಹೆಚ್ಚು ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ದಾಖಲೆ ವಿಶ್ವಕಪ್​ ವಿಜೇತ ಮಹೇಂದ್ರ ಸಿಂಗ್​ ಧೋನಿ ಅವರ ಹೆಸರಿನಲ್ಲಿದೆ. ಧೋನಿ ಅವರು 332 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆ ಬಳಿಕದ ಸ್ಥಾನ ಮೊಹಮ್ಮದ್ ಅಜರುದ್ದೀನ್ (221), ವಿರಾಟ್ ಕೊಹ್ಲಿ (213), ಸೌರವ್ ಗಂಗೂಲಿ (196), ಕಪಿಲ್ ದೇವ್ (108) ಮತ್ತು ರಾಹುಲ್ ದ್ರಾವಿಡ್ (104) ಹೆಸರಿನಲ್ಲಿದೆ. ಒಟ್ಟಾರೆಯಾಗಿ, ಪುರುಷರ ಕ್ರಿಕೆಟ್‌ನಲ್ಲಿ 49 ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡಗಳನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

ಇದನ್ನೂ ಓದಿ ಸಂಪಾದಕೀಯ: ಕಳಪೆ ಕ್ರಿಕೆಟ್ ಅಂಪೈರಿಂಗ್, ತಂತ್ರಜ್ಞಾನ ಆಧರಿತ ತೀರ್ಪಿನಲ್ಲೂ ವ್ಯತ್ಯಯ ಆಗದಿರಲಿ

ಉತ್ತಮ ಪ್ರದರ್ಶನ

ರೋಹಿತ್​ ಅವರ ನಾಯಕತ್ವದಲ್ಲಿ ಭಾರತ ತಂಡ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಆಡಿದ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯ ಓಟ ಕಾಯ್ದುಕೊಂಡಿದೆ. ಇಂಗ್ಲೆಂಡ್​ ವಿರುದ್ಧವೂ ಗೆದ್ದರೆ ತಂಡ ಅಧಿಕೃತವಾಗಿ ಸೆಮಿಫೈನಲ್​ ಪ್ರಬವೇಶ ಪಡೆಯಲಿದೆ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಸೆಮಿ ಪ್ರವೇಶಿಸಿದ ಮೊದಲ ತಂಡ ಎಂಬ ಹಿರಿಮೆಗೂ ಪಾತ್ರವಾಗಲಿದೆ.

ಸದ್ಯ ರೋಹಿತ್​ ಅವರು ಆಡಿದ 5 ಪಂದ್ಯಗಳಿಂದ 311 ರನ್​ ಬಾರಿಸಿ ಅತ್ಯಧಿಕ ರನ್​ ಗಳಿಸಿದವರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಕಳೆದ 2019ರ ವಿಶ್ವಕಪ್​ ಟೂರ್ನಿಯಲ್ಲಿ 5 ಶತಕ ಬಾರಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. ಆದರೆ ಈ ಬಾರಿ ಇದುವರೆಗೆ ಒಂದು ಶತಕ ಮಾತ್ರ ದಾಖಲಾಗಿದೆ. ವಿಶ್ವಕಪ್​ನಲ್ಲಿ ಒಟ್ಟಾರೆ ಅತ್ಯಧಿಕ ಶತಕ ಬಾರಿಸಿದ ದಾಖಲೆ ರೋಹಿತ್​ ಹೆಸರಿನಲ್ಲಿದೆ. ಒಟ್ಟು 7 ಶತಕ ಬಾರಿಸಿದ್ದಾರೆ.

ಇದನ್ನೂ ಓದಿ IND vs ENG: ಇಂದು ಭಾರತ-ಇಂಗ್ಲೆಂಡ್‌ ಕದನ; ರೋಹಿತ್‌ ಪಡೆಗೆ ಸೆಮೀಸ್‌ ತವಕ!

ಅಭ್ಯಾಸದ ವೇಳೆ ಗಾಯ

ರೋಹಿತ್​ ಅವರು ನೆಟ್ಸ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಕೈಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಅವರು ಇಂಗ್ಲೆಂಡ್​ ವಿರುದ್ಧ ಕಣಕ್ಕಿಳಿಯುವುದು ಕೂಡ ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಅವರು ಆಡದಿದ್ದರೆ ಅವರು 100 ಪಂದ್ಯದ ನಾಯಕತ್ವಕ್ಕಾಗಿ ಇನ್ನೊಂದು ಪಂದ್ಯದವರೆಗೂ ಕಾಯಬೇಕು.

ಗಾಯಗೊಂಡ ರೋಹಿತ್​ಗೆ ಕೂಡಲೇ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ. ಆ ಬಳಿಕ ರೋಹಿತ್​ ಅಭ್ಯಾಸವನ್ನು ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ. ಸದ್ಯ ರೋಹಿತ್​ಗೆ​ ಗಂಭೀರ ಗಾಯವಾಗಿದೆಯೇ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಅವರ ಅಲಭ್ಯತೆಯ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಒಂದೊಮ್ಮೆ ರೋಹಿತ್​ ಅವರು ಈ ಪಂದ್ಯದಿಂದ ಹೊರಗಳಿದರೆ ಅವರ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್​ ಸ್ಥಾನದಲ್ಲಿ ಇಶಾನ್​ ಕಿಶನ್​ ಅವರು ಶುಭಮನ್​ ಗಿಲ್​ ಜತೆ ಇನಿಂಗ್ಸ್​ ಆರಂಭಿಸಬಹುದು. ಇಶಾನ್​ ಆರಂಭಿಕ ಆಟಗಾರನಾಗಿರುವ ಕಾರಣ ಮತ್ತು ಇದಕ್ಕೂ ಮುನ್ನ ಗಿಲ್​ ಅವರು ಡೆಂಗ್ಯೂ ಕಾರಣದಿಂದ 2 ಪಂದ್ಯದಿಂದ ಹೊರಗುಳಿದಿದ್ದಾಗ ಇಶಾನ್​ ಅವರು ಇನಿಂಗ್ಸ್​ ಆರಂಭಿಸಿದ್ದರು.

Exit mobile version