Site icon Vistara News

Rohit Sharma: ಸಚಿನ್​ ತೆಂಡೂಲ್ಕರ್​ 2 ದಾಖಲೆ ಮುರಿಯಲು ರೋಹಿತ್​ ಶರ್ಮ ಕಾತರ

Rohith Sharma

ಕ್ಯಾಂಡಿ: ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ(Rohit Sharma) ಅವರು ಏಷ್ಯಾಕಪ್​ನಲ್ಲಿ(Asia Cup 2023) ಹಲವು ದಾಖಲೆಗಳ ಮಧ್ಯೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​(sachin tendulkar) ಅವರ 2 ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ರೋಹಿತ್​ ಸಾರಥ್ಯದಲ್ಲಿ ಭಾರತ ತಂಡ ಶನಿವಾರ ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲು ಸಜ್ಜಾಗುತ್ತಿದೆ.

175 ರನ್ ಬಾರಿಸಿದರೆ ಸಚಿನ್​ ಅವರ ಮೊದಲ ದಾಖಲೆ ಪತನ

ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್​ ಅವರು ಈ ಬಾರಿಯ ಏಷ್ಯಾಕಪ್​ ಟೂರ್ನಿಯಲ್ಲಿ 175 ರನ್ ಬಾರಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10,000 ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಎರಡನೇ ಸ್ಥಾನದಲ್ಲಿದ್ದ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರನ್ನು ಹಿಂದಿಕ್ಕಲಿದ್ದಾರೆ. ವಿರಾಟ್​ ಕೊಹ್ಲಿ(virat kohli) ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ಮೈಲುಗಲ್ಲನ್ನು ಕೇವಲ 213 ಪಂದ್ಯಗಳಲ್ಲಿ ಮಾಡಿದ್ದಾರೆ. ರೋಹಿತ್​ 10 ಸಾವಿರ ರನ್​ಗಳ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರೆ ಈ ಸಾಧನೆ ಮಾಡಿದ ಆರನೇ ಭಾರತೀಯ ಮತ್ತು ಒಟ್ಟಾರೆ 15ನೇ ಆಟಗಾರನೆಂಬ ದಾಖಲೆ ಬರೆಯಲ್ಲಿದ್ದಾರೆ.

ಸದ್ಯ 243 ಏಕದಿನ ಪಂದ್ಯಗಳನ್ನು ಆಡಿದ್ದು 9825* ರನ್​ ಬಾರಿಸಿದ್ದಾರೆ. ಇದರಲ್ಲಿ 30 ಶತಕ ಮತ್ತು 3 ದ್ವಿಶತಕ ಒಳಗೊಂಡಿದೆ. ಏಕದಿನದಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಏಕೈಕ ಆಟಗಾರ ಎಂಬ ಹಿರಿಮೆಯೂ ರೋಹಿತ್​ ಪಾಲಿಗಿದೆ. 264 ರನ್​ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ Virat Kohli: ವಿರಾಟ್​ ಕೊಹ್ಲಿಯ ಕಿವಿಯೋಲೆಗೆ ಅಭಿಮಾನಿಗಳು ಫಿದಾ; ಹೀಗಿದೆ ನ್ಯೂ ಲುಕ್​

ಏಷ್ಯಾಕಪ್​ನಲ್ಲೂ ಸಚಿನ್​ ದಾಖಲೆ ಮುರಿಯುವ ಅವಕಾಶ

ರೋಹಿತ್​ ಶರ್ಮ ಅವರು ಸಚಿನ್​ ಬಳಿಕ ಏಷ್ಯಾಕಪ್​ನಲ್ಲಿ ಹೆಚ್ಚು ರನ್​ಗಳಿಸಿದ ಆಟಗಾರರ ಪೈಕಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೋಹಿತ್​ ಅವರು ಈ ಆವೃತ್ತಿಯಲ್ಲಿ 226 ರನ್​ ಗಳಿಸಿದರೆ ಸಚಿನ್​ ಅವರ ದಾಖಲೆ ಪತನಗೊಳ್ಳಲಿದೆ. ರೋಹಿತ್ ಇದುವರೆಗೆ 22 ಪಂದ್ಯಗಳಿಂದ 46.56 ಸರಾಸರಿಯಲ್ಲಿ 745 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್​​ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಸದ್ಯ ಸಚಿನ್​ ಹೆಸರಿನಲ್ಲಿದೆ ದಾಖಲೆ

ಟೀಮ್​ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು ಭಾರತ ಪರ ಏಷ್ಯಾಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ದಾಖಲೆ ಹೊಂದಿದ್ದಾರೆ. 1990ರಲ್ಲಿ ಏಷ್ಯಾಕಪ್​ ಆಡಿದ ಸಚಿನ್ ತೆಂಡೂಲ್ಕರ್, 51.10 ಸರಾಸರಿಯಲ್ಲಿ 2 ಶತಕ ಹಾಗೂ 7 ಅರ್ಧಶತಕ ನೆರವಿನಿಂದ 971 ರನ್ ಸಿಡಿಸಿದ್ದಾರೆ. ಭಾರತ ಪರ ಈ ಸಾಧನೆ ಮಾಡಿದ ಮೊದಲ ಮತ್ತು ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್​ ಅವರು 2012ರಲ್ಲಿ ಕೊನೆಯ ಬಾರಿ ಏಷ್ಯಾಕಪ್​ ಆಡಿದ್ದರು. ಈ ಆವೃತ್ತಿಯಲ್ಲಿ ಸಚಿನ್(52 ರನ್)​ ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದರು. ಸಚಿನ್​ ಅವರ ದಾಖಲೆಯನ್ನು ಮುರಿಯಲು ರೋಹಿತ್​ ಮತ್ತು ಕೊಹ್ಲಿ ಕಾದುಕುಳಿತಿದ್ದಾರೆ. ಆದರೆ ಇವರಿಬ್ಬರಲ್ಲಿ ಯಾರು ಮೊದಲು ಸಚಿನ್​ ದಾಖಲೆ ಮುರಿಯುತ್ತಾರೆ ಎನ್ನುವುದೇ ಈ ಬಾರಿಯ ಟೂರ್ನಿಯ ಕೌತುಕ.

Exit mobile version