ಕೊಲಂಬೊ: ನೇಪಾಳ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದ ರೋಹಿತ್ ಶರ್ಮ(Rohit Sharma) ಇದೀಗ ಮತ್ತೊಂದು ದಾಖಲೆನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಇನ್ನೂ ಹಲವು ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯುವ ಇರಾದೆಯಲ್ಲಿದ್ದಾರೆ.
ಕ್ರಿಕೆಟ್ನ ಬದ್ಧ ವೈರಿಗಳಾದ ಭಾರತ ಮತ್ತು ಪಾಕ್ ನಡುವಿನ ಏಷ್ಯಾಕಪ್(Asia Cup 2023) ಸೂಪರ್ 4 ಪಂದ್ಯ ಮಧ್ಯಾಹ್ನ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಅರ್ಧಶತಕ ಬಾರಿಸಿದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದು ಪತನಗೊಳ್ಳಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ(ಟಿ20 ಮತ್ತು ಏಕದಿನ) ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರನಾಗಿ ಮೂಡಿಬರಲಿದ್ದಾರೆ. ಕಳೆದ ನೇಪಾಳ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ರೋಹಿತ್ ಈ ದಾಖಲೆಯನ್ನು ಸರಿಗಟ್ಟಿದ್ದರು. ಸದ್ಯ ಸಚಿನ್ ಮತ್ತು ರೋಹಿತ್ 7 ಅರ್ಧಶತಕ ಬಾರಿಸಿದ್ದಾರೆ.
ಇದನ್ನೂ ಓದಿ IND vs PAK: ಇಂಡೋ-ಪಾಕ್ ಪಂದ್ಯ ನೋಡಲು ಪ್ರವಾಸ, ಸುತ್ತಾಟ ಬದಿಗಿಟ್ಟ ಅಭಿಮಾನಿಗಳಿಗೆ ನಿರಾಸೆ…
ಇದಲ್ಲದೆ ರೋಹಿತ್ ಶರ್ಮ ಅವರು ಸಚಿನ್ ಬಳಿಕ ಏಷ್ಯಾಕಪ್ನಲ್ಲಿ ಹೆಚ್ಚು ರನ್ಗಳಿಸಿದ ಭಾರತೀಯ ಆಟಗಾರರ ಪೈಕಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೋಹಿತ್ ಅವರು ಈ ಆವೃತ್ತಿಯಲ್ಲಿ 141 ರನ್ ಗಳಿಸಿದರೆ ಸಚಿನ್ ಅವರ ದಾಖಲೆ ಪತನಗೊಳ್ಳಲಿದೆ. ರೋಹಿತ್ ಇದುವರೆಗೆ 24 ಪಂದ್ಯಗಳಿಂದ 48.82 ಸರಾಸರಿಯಲ್ಲಿ 830 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.
10 ಸಾವಿರ ರನ್ ಸನಿಹ ರೋಹಿತ್
ರೋಹಿತ್ ಅವರು ಪಾಕ್ ವಿರುದ್ಧ 78 ರನ್ ಬಾರಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10,000 ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಎರಡನೇ ಸ್ಥಾನದಲ್ಲಿದ್ದ ಸಚಿನ್ ತೆಂಡೂಲ್ಕರ್(Sachin Tendulkar) ಅವರನ್ನು ಹಿಂದಿಕ್ಕಲಿದ್ದಾರೆ. ವಿರಾಟ್ ಕೊಹ್ಲಿ(virat kohli) ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ಮೈಲುಗಲ್ಲನ್ನು ಕೇವಲ 213 ಪಂದ್ಯಗಳಲ್ಲಿ ಮಾಡಿದ್ದಾರೆ. ರೋಹಿತ್ 10 ಸಾವಿರ ರನ್ಗಳ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರೆ ಈ ಸಾಧನೆ ಮಾಡಿದ ಆರನೇ ಭಾರತೀಯ ಮತ್ತು ಒಟ್ಟಾರೆ 15ನೇ ಆಟಗಾರನೆಂಬ ದಾಖಲೆ ಬರೆಯಲ್ಲಿದ್ದಾರೆ.
ಸದ್ಯ 246 ಏಕದಿನ ಪಂದ್ಯಗಳನ್ನು ಆಡಿದ್ದು 9922* ರನ್ ಬಾರಿಸಿದ್ದಾರೆ. ಇದರಲ್ಲಿ 30 ಶತಕ ಮತ್ತು 3 ದ್ವಿಶತಕ ಒಳಗೊಂಡಿದೆ. ಏಕದಿನದಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಏಕೈಕ ಆಟಗಾರ ಎಂಬ ಹಿರಿಮೆಯೂ ರೋಹಿತ್ ಪಾಲಿಗಿದೆ. 264 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.