Site icon Vistara News

ಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​; ಕೊಹ್ಲಿ ದಾಖಲೆಯೂ ಉಡೀಸ್​

Rohit Sharma notched up his fifth T20I hundred in Bengaluru

ಬೆಂಗಳೂರು: ಅಫಘಾನಿಸ್ತಾನ(India vs Afghanistan, 3rd T20I) ಎದುರಿನ ಆರಂಭಿಕ ಎರಡು ಟಿ20 ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ಹಿಟ್​ಮ್ಯಾನ್​ ರೋಹಿತ್​ ಶರ್ಮ(Rohit Sharma) ಅಂತಿಮ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿ ಅಜೇಯ ಶತಕ ಬಾರಿಸಿ ಮಿಂಚಿದರು. ಜತೆಗೆ ಹಲವು ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದಿದ್ದಾರೆ.

ಶತಕದ ದಾಖಲೆ


4 ವಿಕೆಟ್​ ಕಳೆದುಕೊಂಡು ತಂಡ ಆರಂಭಿಕ ಆಘಾತ ಎದುರಿಸಿದರೂ ಧೃತಿಗೆಡದೆ ಬ್ಯಾಟಿಂಗ್​ ನಡೆಸಿದ ರೋಹಿತ್​ ಶರ್ಮ ಕೇವಲ 69 ಎಸತಗಳಿಂದ ಸೊಗಸಾದ 8 ಸಿಕ್ಸರ್​ ಮತ್ತು 11 ಬೌಂಡರಿ ನೆರವಿನಿಂದ ಅಜೇಯ 121 ರನ್​ ಬಾರಿಸಿ ಶತಕ ಪೂರ್ತಿಗೊಳಿಸಿದರು. ರೋಹಿತ್​ ಈ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇದು ರೋಹಿತ್​ ಅವರ 5ನೇ ಅಂತಾರಾಷ್ಟ್ರೀಯ ಟಿ20 ಶತಕ. 4 ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್​ ಮತ್ತು ಆಸೀಸ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ದಾಖಲೆ ಉಡೀಸ್​


ಈ ಪಂದ್ಯದಲ್ಲಿ ರೋಹಿತ್​ 44ರನ್​ ಗಳಿಸುತ್ತಿದ್ದಂತೆ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿಯ ದಾಖಲೆಯೊಂದನ್ನು ಮುರಿದರು. ನಾಯಕನಾಗಿ ಭಾರತ ಪರ ಅತ್ಯಧಿಕ ರನ್​ಗಳಿಸಿದ ಆಟಗಾರನಾಗಿ ಮೂಡಿಬಂದರು. ಕೊಹ್ಲಿ ನಾಯಕನಾಗಿ 1570 ರನ್​ ಬಾರಿಸಿದ್ದರು. ಆದರೆ, ಈಗ ರೋಹಿತ್​ ಈ ಮೊತ್ತವನ್ನು ಹಿಂದಿಕ್ಕಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಜತೆಯಾಟದ ದಾಖಲೆ


ರಿಂಕು ಮತ್ತು ರೋಹಿತ್​ ಸೇರಿಕೊಂಡು 5ನೇ ವಿಕೆಟ್​ಗೆ ಅಜೇಯ 190 ರನ್​ ಜತೆಯಾಟ ನಡೆಸಿ ಭಾರತದ ಬೃಹತ್​ ಮೊತ್ತಕ್ಕೆ ಕಾರಣರಾದರು. ಜತೆಗೆ ಈ ಜೋಡಿ ಯಾವುದೇ ವಿಕೆಟ್​ಗೆ ಭಾರತ ಪರ ಅತ್ಯಧಿಕ ಜತೆಯಾಟ ನಡೆಸಿದ ಮೊದಲ ಜೋಡಿ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸಂಜು ಸ್ಯಾಮ್ಸನ್​ ಮತ್ತು ದೀಪಕ್​ ಹೂಡಾ ಹಸರಿನಲ್ಲಿತ್ತು. ಈ ಜೋಡಿ ಐರ್ಲೆಂಡರ್​ ವಿರುದ್ಧ 2022ರಲ್ಲಿ 176 ರನ್​ಗಳ ಜತೆಯಾಟ ನಡೆಸಿತ್ತು.

ರಿಂಕು ಸಿಂಗ್​ ಕೂಡ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಗಮನಸೆಳೆದರು. ಅವರು 38 ಎಸೆತ ಎದುರಿಸಿ ಅಜೇಯ 63 ರನ್​ ಗಳಿಸಿದರು. ಸಿಡಿದದ್ದು 6 ಸಿಕ್ಸರ್​ ಮತ್ತು 2 ಬೌಂಡರಿ. ಅದರಲ್ಲೂ ಕೊನೆಯ ಓವರ್​ ಎಸೆದ ಕರೀಂ ಜನ್ನತ್​ಗೆ ಹ್ಯಾಟ್ರಿಕ್ ಸಿಕ್ಸರ್​ ಬಾರಿಸಿ ಮಿಂಚಿದರು.

Exit mobile version