Site icon Vistara News

RR vs GT: ರಾಜಸ್ಥಾನ್​ ಅಜೇಯ ಗೆಲುವಿನ ಓಟಕ್ಕೆ​ ಬ್ರೇಕ್​ ಹಾಕಿದ ಟೈಟಾನ್ಸ್​

RR vs GT

ಜೈಪುರ: ಮಳೆಯಿಂದ ಕೆಲವು ಬಾರಿ ಅಡಚಣೆಗೊಂಡ ಬುಧವಾರದ ರೋಚಕ ಐಪಿಎಲ್(IPL 2024)​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್(Gujarat Titans) ತಂಡ ರಾಜಸ್ಥಾನ್​ ರಾಯಲ್ಸ್(RR vs GT)​ ​ವಿರುದ್ಧ 3 ವಿಕೆಟ್​ಗಳ ಗೆಲುವು ಸಾಧಿಸಿದೆ. ಸೋಲಿನೊಂದಿಗೆ ರಾಜಸ್ಥಾನ್​(Rajasthan Royals) ತಂಡದ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ.

ಜೈಪುರದ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ರಾಜಸ್ಥಾನ್​ ರಾಯಲ್ಸ್​, ನಾಯಕ ಸಂಜು ಸ್ಯಾಮ್ಸನ್(68)​ ಮತ್ತು ರಿಯಾನ್​ ಪರಾಗ್(74)​ ಅವರ ವಿಸ್ಫೋಟಕ ಬ್ಯಾಟಿಂಗ್​ ಹಾಗೂ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 196 ರನ್​ ಬಾರಿಸಿತು. ಜವಾಬಿತ್ತ ಗುಜರಾತ್​ ತಂಡ ದಿಟ್ಟ ಬ್ಯಾಟಿಂಗ್​ ಹೋರಾಟ ನಡೆಸಿ ಭರ್ತಿ 20 ಓವರ್​ ಆಡಿ 7 ವಿಕೆಟ್​ ನಷ್ಟಕ್ಕೆ 199 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಗುಜರಾತ್​ ತಂಡಕ್ಕೆ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್​ ಗಿಲ್​ ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. ಗಿಲ್​ ಮತ್ತು ಸಾಯಿ ಮೊದಲ ವಿಕೆಟ್​ಗೆ 64 ರನ್​ ಒಟ್ಟುಗೂಡಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಗಿಲ್​ 2 ಸಿಕ್ಸರ್​ ಮತ್ತು 6 ಬೌಂಡರಿ ನೆರವಿನಿಂದ 72 ರನ್​ ಬಾರಿಸಿದರು. ಇವರ ಜತೆಗಾರ ಸಾಯಿ ಸುರ್ದಶನ್​ 35 ರನ್​ ಗಳಿಸಿದರು.

ಇದನ್ನೂ ಓದಿ IPL 2024 : ವನಿಂದು ಬದಲಿಗೆ ಲಂಕಾ ಬೌಲರ್​​ನನ್ನೇ ಆಯ್ಕೆ ಮಾಡಿಕೊಂಡ ಎಸ್​ಆರ್​ಎಚ್​​​

ಇನ್ನೇನು ಗುಜರಾತ್​ ಸೋಲುತ್ತದೆ ಎನ್ನುವಷ್ಟರಲ್ಲಿ ಅಂತಿಮ ಹಂತದಲ್ಲಿ ರಾಹುಲ್​ ತೆವಾಟಿಯ ಮತ್ತು ರಶೀದ್​ ಖಾನ್​ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 12 ಎಸೆತಗಳಲ್ಲಿ ಗೆಲುವಿಗೆ 35 ರನ್​ ಗಳಿಸುವ ಸವಾಲನ್ನು ಮೆಟ್ಟಿ ನಿಂತರು. ತೆವಾಟಿಯ 11 ಎಸೆತಗಳಿಂದ 22 ರನ್​​ ಬಾರಿಸಿದರೆ, ರಶೀದ್​ ಖಾನ್​ 11 ಎಸೆತಗಳಲ್ಲಿ ಅಜೇಯ 24 ರನ್​ ಚಚ್ಚಿದರು. 150ನೇ ಐಪಿಎಲ್​ ಪಂದ್ಯವನ್ನಾಡಿದ ಯಜುವೇಂದ್ರ ಚಹಲ್​ ಅವರು 4 ಓವರ್​ ಬೌಲಿಂಗ್​ನಡೆಸಿ 2 ವಿಕೆಟ್​ ಉಡಾಯಿಸಿದರು. ಮಧ್ಯ ಪ್ರದೇಶದ ಮೂಲದ ಯುವ ವೇಗಿ ಕುಲ್​ದೀಪ್ ಸೇನ್​​ ಘಾತಕ ಬೌಲಿಂಗ್ ದಾಳಿ ನಡೆಸಿ 3 ವಿಕೆಟ್​ ಕಬಳಿಸಿದರು. ಸೋಲಿನಿಂದಾಗಿ ಸಂಜು ಮತ್ತು ಪರಾಗ್​ ಅವರ ಅರ್ಧಶತಕ ವ್ಯರ್ಥಗೊಂಡಿತು.

ದಾಖಲೆ ಬರೆದ ಗಿಲ್​


ಶುಭಮನ್​ ಗಿಲ್​ ಅವರು​ ಐಪಿಎಲ್​ನಲ್ಲಿ 3 ಸಾವಿರ ರನ್​ಗಳ ಗಡಿ ದಾಟಿದ ಸಾಧನೆ ಮಾಡಿದರು. 27 ರನ್​ ಗಳಿಸುತ್ತಿದ್ದಂತೆ ಗಿಲ್​ ಈ ಮೇಲುಗಲ್ಲು ನೆಟ್ಟರು. ಈ ಮೂಲಕ ಕೊಹ್ಲಿಯ ದಾಖಲೆಯನ್ನು ಮುರಿದರು. ಕೊಹ್ಲಿ 26 ವರ್ಷ 186 ದಿನದಲ್ಲಿ ಈ ದಾಖಲೆ ಬರೆದಿದ್ದರು. ಆದರೆ ಗಿಲ್​ ಕೇವಲ 24 ವರ್ಷ 215 ದಿನದಲ್ಲಿ ಈ ದಾಖಲೆಯನ್ನು ಮೀರಿ ನಿಂತರು. ಇದು ಮಾತ್ರವಲ್ಲದೆ ಅತಿ ಕಡಿಮೆ ಇನಿಂಗ್ಸ್​ನಲ್ಲಿ 3 ಸಾವಿರ ರನ್​ ಪೂತಿಗೊಳಿಸಿದ 4ನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ದಾಖಲೆ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. 75 ಇನಿಂಗ್ಸ್​ನಿಂದ ಗೇಲ್​ ಈ ಸಾಧನೆ ಮಾಡಿದ್ದಾರೆ. ಗಿಲ್​ 94 ಇನಿಂಗ್ಸ್​ನಿಂದ ಈ ದಾಖಲೆ ಬರೆದರು.

ಇದನ್ನೂ ಓದಿ IPL 2024: ಆರ್​ಸಿಬಿ ಸೋಲಿಗೆ ಮ್ಯಾಕ್ಸ್​ವೆಲ್ ಕುಡಿತವೇ ಕಾರಣವಂತೆ!; ದಿನಕ್ಕೆ ಎಷ್ಟು ಪೆಗ್​ ಬೇಕು?

ಸಂಜು-ಪರಾಗ್​ ಉತ್ತಮ ಜತೆಯಾಟ


ಮೊದಲು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್​ ತಂಡದ ಪರ ರಿಯಾನ್​ ಪರಾಗ್​ ಮತ್ತು ಸಂಜು ಸ್ಯಾಮ್ಸನ್​ ಉತ್ತಮ ಆಟವಾಡಿ ತಂಡಕ್ಕೆ ನೆರವಾದರು. ಜಾಸ್​ ಬಟ್ಲರ್​ ಅವರ ವಿಕೆಟ್​ ಪತನದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಪರಾಗ್​ ಕೇಲವ 6 ರನ್​ ಗಳಿಸಿದ್ದ ವೇಳೆ ರಶೀದ್​ ಖಾನ್​ ಅವರ ಓವರ್​ನಲ್ಲಿ ಕೀಪರ್​ ಮ್ಯಾಥ್ಯೂ ವೇಡ್​ ಕೈಚೆಲ್ಲಿದ ಕ್ಯಾಚ್​ನಿಂದ ಜೀವದಾನ ಪಡೆದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಅವರು 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು.

ಇದನ್ನೂ ಓದಿ IPL 2024: ಸ್ಮರಣೀಯ ಪಂದ್ಯವನ್ನಾಡುತ್ತಿರುವ ಚಹಲ್​ಗೆ ಪತ್ನಿಯಿಂದ ಭಾವುಕ ಸಂದೇಶ

ಪರಾಗ್​ ಇದೇ ಪಂದ್ಯದಲ್ಲಿ ಧೋನಿ(ms dhoni) ಪರಿಚಯಿಸಿದ ‘ಹೆಲಿಕಾಪ್ಟರ್ ಶಾಟ್’(Helicopter shot) ಹೊಡೆದು ಮೆಚ್ಚುಗೆಗೆ ಪಾತ್ರರಾದರು. ಗುಜರಾತ್​ ಬೌಲಿಂಗ್​ ಇನಿಂಗ್ಸ್​ನ 17ನೇ ಓವರ್​ನ ದ್ವಿತೀಯ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಮೋಹಿತ್​ ಶರ್ಮ ಎಸೆತವನ್ನು ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿದರು. ಉಮೇಶ್​ ಯಾದವ್​ ಅವರು ಬೌಂಡರಿ ತಡೆಯುವ ಪ್ರಯತ್ನ ಮಾಡಿದರೂ ಕೂಡ ವಿಫಲರಾದರು.

ಪ್ರತಿ ಓವರ್​ಗೊಂದು ಸಿಕ್ಸರ್​ ಮತ್ತು ಬೌಂಡರಿ ಬಾರಿಸುತ್ತಲೇ ಮುನ್ನುಗ್ಗಿದ ಪರಾಗ್​ ಅಂತಿಮವಾಗಿ 48 ಎಸೆತಗಳಿಂದ 76 ರನ್​ ಗಳಿಸಿ ಬೌಂಡರಿ ಲೈನ್​ನಲ್ಲಿ ವಿಜಯ್​ ಶಂಕರ್​ ಹಿಡಿದ ಅಸಾಮಾನ್ಯ ಕಾಚ್​ನಿಂದ ಔಟಾದರು. ಅವರ ಈ ಸ್ಫೋಟಕ ಇನಿಂಗ್ಸ್​ನಲ್ಲಿ 5 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ದಾಖಲಾಯಿತು. 4ನೇ ವಿಕೆಟ್​ಗೆ ನಾಯಕ ಸಂಜು ಜತೆ ಸೇರಿ 130 ರನ್​ಗಳ ಜತೆಯಾಟ ಕೂಡ ನಿಭಾಯಿಸಿದರು.

ಸಂಜು ಸ್ಯಾಮ್ಸನ್​ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ 38 ಎಸೆತಗಳಿಂದ ಅಜೇಯ 68 ರನ್​ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಕಳೆದ ಆರ್​ಸಿಬಿ ವಿರುದ್ಧ ಅಜೇಯ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಜಾಸ್​ ಬಟ್ಲರ್​ ಈ ಪಂದ್ಯದಲ್ಲಿ ಕೇವಲ 8 ರನ್​ ಗಳಿಸಿ ನಿರಾಸೆ ಮೂಡಿಸಿದರು. ಇವರ ಜತೆಗಾರ ಯಶಸ್ವಿ ಜೈಸ್ವಾಲ್​ 24 ರನ್​ ಗಳಿಸಿದರು. ಗುಜರಾತ್​ ಪರ ಉಮೇಶ್​ ಯಾದವ್​, ರಶೀದ್​ ಖಾನ್​, ಮತ್ತು ಮೋಹಿತ್​ ಶರ್ಮ ತಲಾ ಒಂದೊಂದು ವಿಕೆಟ್​ ಪಡೆದರು.

Exit mobile version