ಗುವಾಹಟಿ: 17ನೇ ಆವೃತ್ತಿಯ ಐಪಿಎಲ್ನ(IPL 2024) ಕೊನೆಯ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್ ರಾಯಲ್ಸ್(RR vs KKR) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ ಮಳೆಯಿಂದ ಒಂದೂ ಎಸೆತ ಕಾಣದೆ ಈ ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.
10 ಗಂಟೆ ಸುಮಾರಿಗೆ ಮಳೆ ನಿಂತಿತು. ಮಳೆ ನಿಂತ ಕಾರಣ ಪಂದ್ಯವನ್ನು ಡಕ್ವರ್ತ್ ನಿಯಮದ ಪ್ರಕಾರ 7 ಓವರ್ಗೆ ಸೀಮಿತಗೊಳಿಸಿ ಟಾಸ್ ಕೂಡ ಹಾರಿಸಲಾಯಿತು. ಟಾಸ್ ಗೆದ್ದು ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿತು. ಇನ್ನೇನು ಆಟಗಾರರು ಮೈದಾನಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಮಳೆ ಮತ್ತೆ ಆರಂಭಗೊಂಡಿತು. ಹೀಗಾಗಿ ಅಂಪೈರ್ಗಳು ಕೊನೆಗೆ ಪಂದ್ಯವನ್ನು ರದ್ದು ಎಂದು ಘೋಷಣೆ ಮಾಡಿದರು.
ಕೆಕೆಆರ್ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್ಗೆ(Rajasthan Royals) ಮಳೆ ತಣ್ಣೀರೆರಚಿತು. ಸನ್ರೈಸರ್ಸ್ ಹೈದರಾಬಾದ್ 2ನೇ ತಂಡವಾಗಿ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಿತು. ರಾಜಸ್ಥಾನ್ ಮತ್ತು ಹೈದರಾಬಾದ್ ಸಮಾನ 17 ಅಂಕ ಹೊಂದಿದರೂ ರನ್ ರೇಟ್ನಲ್ಲಿ ಮುಂದಿದ್ದ ಕಾರಣ ಈ ಲಾಭ ಕಮಿನ್ಸ್ ಪಡೆಗೆ ಲಭಿಸಿತು. ಮಂಗಳವಾರ(ಮೇ 21) ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೈದರಾಬಾದ್ ಕಣಕ್ಕಿಳಿಯಲಿದೆ. ಈ ಪಂದ್ಯ ಅಹಮದಾಬಾದ್ನಲ್ಲಿ ನಡೆಯಲಿದೆ.
ಆರ್ಸಿಬಿ-ರಾಜಸ್ಥಾನ್ ಮಧ್ಯೆ ಎಲಿಮಿನೇಟರ್ ಪಂದ್ಯ
ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತವಾಗಿ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಫ್ಗೆ ಲಗ್ಗೆಯಿಟ್ಟ ಆರ್ಸಿಬಿಗೆ ಎಲಿಮಿನೇಟರ್ ಪಂದ್ಯದಲ್ಲೂ ಲಕ್ ಹೈ ಹಿಡಿಯುವುದೇ ಎಂದು ಕಾದು ನೋಡಬೇಕಿದೆ.
ಪಂಜಾಬ್ ವಿರುದ್ಧ ಗೆದ್ದ ಹೈದರಾಬಾದ್
ದಿನದ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ 17 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಬ್ಯಾಟಿಂಗ್ ಸ್ನೇಹಿಯಾದ ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ 5 ವಿಕೆಟ್ಗೆ 214 ರನ್ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆದರೆ ಈ ಮೊತ್ತ ಹೈದರಾಬಾದ್ ತಂಡವನ್ನು ಕಟ್ಟಿ ಹಾಕಲು ಸಾಕಾಗಲಿಲ್ಲ. ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ 19.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 215 ಬಾರಿಸಿ ತವರಿನಲ್ಲಿ ವಿಜಯ ಪತಾಕೆ ಹಾರಿಸಿತು. ಉಭಯ ತಂಡಗಳ ಜಿದ್ದಾಜಿದ್ದಿನ ಬ್ಯಾಟಿಂಗ್ ಪರಾಕ್ರಮದಿಂದಾಗಿ ಈ ಪಂದ್ಯದಲ್ಲಿ ಒಟ್ಟು 429 ರನ್ ದಾಖಲಾಯಿತು.