Site icon Vistara News

RR vs LSG: ​ರಾಜಸ್ಥಾನ್ ವಿರುದ್ಧ ಹೋರಾಡಿ ಸೋತ ಲಕ್ನೋ ಸೂಪರ್​ಜೈಂಟ್ಸ್

Rajasthan Royals vs Lucknow Super Giants

ಜೈಪುರ: ಭಾನುವಾರದ ದೊಡ್ಡ ಮೊತ್ತದ ಐಪಿಎಲ್(IPL 2024)​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​(RR vs LSG) ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್ ​ಜೈಂಟ್ಸ್​ ವಿರುದ್ಧ 20 ರನ್​ಗಳ ಸೂಪರ್ ಗೆಲುವು ಸಾಧಿಸಿದೆ. ಈ ಮೂಲಕ ಹಾಲಿ ಆವೃತ್ತಿಯಲ್ಲಿ ತವರಿನಲ್ಲಿ ಆಡಿದ ತಂಡವೇ ಮತ್ತೊಮ್ಮೆ ಗೆಲುವು ಸಾಧಿಸಿದಂತಾಗಿದೆ. ಇದುವರೆಗೆ ನಡೆದ ಮೂರು ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆದ್ದು ಬೀಗಿತ್ತು.

ಇಲ್ಲಿನ ಸವಾಯ್ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್,​ ನಾಯಕ ಸಂಜು ಸ್ಯಾಮ್ಸನ್​ ಅವರ ಆಕರ್ಷಕ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 193 ರನ್​ಗಳ ಭರ್ಜರಿ ಮೊತ್ತ ಪೇರಿಸಿತು. ಈ ಸವಾಲನ್ನು ಲಕ್ನೋ ದಿಟ್ಟ ರೀತಿಯಿಂದ ಬೆನ್ನಟ್ಟಿಕೊಂಡು ಹೋದರೂ ಕೂಡ ಅಂತಿಮವಾಗಿ 6 ವಿಕೆಟ್​ಗೆ 173 ರನ್​ ಮಾತ್ರ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ವ್ಯರ್ಥವಾದ ಪೂರನ್​-ರಾಹುಲ್​ ಹೋರಾಟ


ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಅನುಭವಿ ಆಟಗಾರ ಕ್ವಿಂಟನ್​ ಡಿ ಕಾಕ್(4), ದೇವದತ್ತ ಪಡಿಕ್ಕಲ್​(0) ಮತ್ತು ಆಯುಷ್‌ ಬದೋನಿ(1) ಬೇಗನೆ ಪೆವಿಲಿಯನ್​ ಸೇರಿದರು. 11 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ದೀಪಕ್​ ಹೂಡ ಬಡಬಡನೆ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದರೂ ಕೂಡ ಅವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. 26 ರನ್​ ಗಳಿಸಿ ಅವರು ಕೂಡ ವಿಕೆಟ್​ ಕೈಚೆಲ್ಲಿದರು.

ಇದನ್ನೂ ಓದಿ IPL 2024: ಪಂದ್ಯದ ವೇಳೆ ತುಂಡಾಗಿ ಬಿದ್ದ ಸ್ಪೈಡರ್‌ಕ್ಯಾಮ್ ಕೇಬಲ್​; ತಪ್ಪಿದ ಭಾರಿ ಅನಾಹುತ


ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಕೂಡ ಆರಂಭಿಕನಾಗಿ ಕಣಕ್ಕಿಳಿದ ನಾಯಕ ರಾಹುಲ್​ ಅವರು 6ನೇ ಕ್ರಮಾಂಕದಲ್ಲಿ ಆಡಲಿಳಿದ ವಿಂಡೀಸ್​ನ ಅಪಾಯಕಾರಿ ಬ್ಯಾಟರ್​ ನಿಕೋಲಸ್​ ಪೂರನ್​ ಜತೆ ಸೇರಿಕೊಂಡು ಬಿರುಸಿನ ಬ್ಯಾಟಿಂಗ್​ ನಡೆಸಿದರು. ಅತ್ತ ಪೂರನ್​ ಕೂಡ ಹೊಡಿಬಡಿಯ ಆಟದ ಮೂಲಕ ಗಮನಸೆಳೆದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಉಭಯ ಆಟಗಾರರು ರಾಜಸ್ಥಾನ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. ರಾಹುಲ್​ ಅರ್ಧಶತಕ ಬಾರಿಸಿ ಮಿಂಚಿದರು. 44 ಎಸೆತ ಎದುರಿಸಿದ ರಾಹುಲ್​ 58 ರನ್​ ಬಾರಿಸಿದರು(4 ಬೌಂಡರಿ, 2 ಸಿಕ್ಸರ್​).

ಈ ಜೋಡಿ 5ನೇ ವಿಕೆಟ್​ಗೆ 85 ರನ್​ ಕಲೆಹಾಕಿತು. ಇವರಿಬ್ಬರ ಈ ಸಾಹಸದ ಹೊರತಾಗಿಯೂ ಲಕ್ನೋ ಗೆಲುವು ಸಾಧಿಸುವಲ್ಲಿ ವಿಫಲವಾಯಿತು. ರಾಹುಲ್​ ವಿಕೆಟ್​ ಪತನದ ಬಳಿಕ ಪೂರನ್​ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗಲಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಅಂತಿಮ ಹಂತದ ವರೆಗೆ ಹೋರಾಟ ನಡೆಸಿದ ಪೂರನ್ ತಲಾ 4 ಸಿಕ್ಸರ್​ ಮತ್ತು ಬೌಂಡರಿ ನೆರವಿನಿಂದ 64 ರನ್​ ಬಾರಿಸಿ ಅಜೇಯರಾಗಿ ಉಳಿದರು. ಸೋಲಿನಿಂದಾಗಿ ರಾಹುಲ್​ ಮತ್ತು ಪೂರನ್​ ಬ್ಯಾಟಿಂಗ್​ ಹೋರಟ ವ್ಯರ್ಥವಾಯಿತು.

ಸಂಜು ಅರ್ಧಶತಕ

ಮೊದಲು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್ ಪರ​ ನಾಯಕ ಸಂಜು ಸ್ಯಾಮ್ಸನ್​ ಭರ್ಜರಿ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಸಂಜು ಪಂದ್ಯದ ಕೊನೆಯ ಎಸೆತದವರೆಗೂ ಲಕ್ನೋ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಮೂರನೇ ವಿಕೆಟ್‌ಗೆ ರಿಯಾನ್ ಪರಾಗ್ ಜತೆ ಸೇರಿ ಕೇವಲ 59 ಎಸೆತಗಳಲ್ಲಿ 93 ರನ್‌ಗಳ ಜತೆಯಾಟವಾಡಿ ತಂಡಕ್ಕೆ ನೆರವಾದರು.

ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಯಾನ್ ಪರಾಗ್ 29 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 33 ಎಸೆತಗಳನ್ನು ಎದುರಿಸಿ 21ನೇ ಐಪಿಎಲ್ ಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ 52 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಬಾರಿಸಿದರು.

ಅರ್ಧಶತಕ ಬಾರಿಸಿದ ಸಂಜು 2020 ರಿಂದ ಆಡಿದ ಪ್ರತಿ ಐಪಿಎಲ್​ನ ಮೊದಲ ಪಂದ್ಯದಲ್ಲಿಯೂ 50 ಪ್ಲಸ್​ ಮೊತ್ತ ಗಳಿಸಿದ ಸಾಧನೆ ಮಾಡಿದರು. ಲಕ್ನೋ ಪರ ನವೀನ್ ಉಲ್ ಹಕ್ 41 ರನ್ ನೀಡಿ ಎರಡು ವಿಕೆಟ್ ಪಡೆದರೆ, ರವಿ ಬಿಷ್ಣೋಯಿ ಹಾಗೂ ಮೊಯ್ಸಿನ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

Exit mobile version