ಲಖನೌ: ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಹಿಂದಿ ದಿನಪತ್ರಿಕೆ ಪಂಜಾಬ್ ಕೇಸರಿ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ 2 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮನ್ನು ಪುರಾಣದಲ್ಲಿನ ರಾಕ್ಷಸ ಪಾತ್ರವಾಗಿರುವ ಭಸ್ಮಾಸುರನಿಗೆ ಹೋಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪಂಜಾಬ್ ಕೇಸರಿ ಪತ್ರಿಕೆಯ ಸಂಪಾದಕ ಆದಿತ್ಯ ಚೋಪ್ರಾ ಮತ್ತು ವರದಿಗಾರರಾದ ಅಮಿತ್ ಕುಮಾರ್ ಮತ್ತು ಇಮ್ರಾನ್ ಖಾನ್ ವಿರುದ್ಧ ಗಂಭೀರ್ ಮೊಕದ್ದಮೆ ಹೂಡಿದ್ದಾರೆ. ತಮ್ಮನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ಹಲವಾರು ದುರುದ್ದೇಶಪೂರಿತ ಮತ್ತು ಮಾನಹಾನಿಕರ ಲೇಖನಗಳನ್ನು ಪ್ರಕಟಿಸಿರುವ ಈ ಮೂವರು ಪತ್ರಿಕೋದ್ಯಮ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗಂಭೀರ್ ಆರೋಪಿಸಿದ್ದಾರೆ.
ವಕೀಲ ಜೈ ಅನಂತ್ ದೆಹದ್ರಾಯ್ ಅವರ ಮೂಲಕ ಸಲ್ಲಿಸಿದ ಮೊಕದ್ದಮೆಯಲ್ಲಿ ಗಂಭೀರ್, ಪತ್ರಿಕೆಯು ನನ್ನ ಕಥೆಗಳಿಗೆ ಅನಗತ್ಯ ತಿರುವುಗಳನ್ನು ನೀಡಲಾಗಿದೆ, ಪತ್ರಿಕೆಯು ಭಸ್ಮಾಸುರ ಎಂದು ಕರೆಯುವ ಮೂಲಕ ವರದಿಯಲ್ಲಿ ಅವಮಾನ ಮಾಡಲಾಗಿದೆ ಎಂದು ಗಂಭೀರ್ ಆರೋಪಿಸಿದ್ದಾರೆ.
ಡೆಲ್ಲಿಯ ಸಂಸದ ನಾಪತ್ತೆಯಾಗಿದ್ದು ಅವರನ್ನು ಡೆಲ್ಲಿಯ ಮಂದಿ ಹುಡುಕುತ್ತಿದ್ದಾರೆ. ಡೆಲ್ಲಿಯಂದ ಕಣ್ಮರೆಯಾಗಿರುವ ಸಂಸದರು ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು ಭಸ್ಮಾಸುರನಂತೆ ನಾಶ ಮಾಡುತ್ತಿದ್ದಾರೆ. ಸಭೆಗಳನ್ನು ನಡೆಸುವ ವೇಳೆ ಈ ಸಂಸದನಿಂದ ದೂರವಿರಿ ಎಂದು ವರದಿಯಲ್ಲಿ ಬರೆಯುವ ಮೂಲಕ ನನಗೆ ಅವಮಾನ ಮಾಡಲಾಗಿದೆ ಎಂದು ಗಂಭೀರ್ ದೂರಿದ್ದಾರೆ.
ಇದನ್ನೂ ಓದಿ ವ: Virat kohli : ವಿರಾಟ್ ಕೊಹ್ಲಿಯನ್ನು ಮೊದಲ ಬಾರಿ ಹೊಗಳಿದ ಗೌತಮ್ ಗಂಭೀರ್!
ಈ ವರದಿಗಳು ನನ್ನ ಕೆಲಸದ ಬಗ್ಗೆ ಸುಳ್ಳು ಮತ್ತು ಅನಗತ್ಯ ಮಾನಹಾನಿಕರ ನಿರೂಪಣೆಯನ್ನು ಸೃಷ್ಟಿಸುತ್ತವೆ. ಸಂಸದೀಯಪಟುವಾಗಿರುವ ನನ್ನ ಬಗ್ಗೆ ಓದುಗರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತದೆ ಎಂದು ಗಂಭೀರ್ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದ್ದಾರೆ.
ಗಂಭೀರ್ ಅವರು ತಮ್ಮ ಮಾನನಷ್ಟ ಮೊಕದ್ದಮೆಯ ದುಡ್ಡು ದತ್ತಿ ಸಂಸ್ಥೆಗಳಿಗೆ ನೀಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಅವರು ಪತ್ರಿಕೆ ಬೇಷರತ್ ಕ್ಷಮೆ ಯಾಚಿಸಬೇಕು ಅದನ್ನು ಪಂಜಾಬ್ ಕೇಸರಿ ಪ್ರಸಾರ ಮಾಡುವ ಎಲ್ಲಾ ಪತ್ರಿಕೆಗಳಲ್ಲಿ (ಡಿಜಿಟಲ್ ಆವೃತ್ತಿಗಳು ಸೇರಿದಂತೆ) ಪ್ರಕಟಿಸಬೇಕು ಎಂದು ಕೋರಿದ್ದಾರೆ.