ದುಬೈ : ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯಲ್ಲಿ ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಎರಡು ಶತಕಗಳನ್ನು ಬಾರಿಸಿದ್ದರು. ಅದಕ್ಕಿಂತ ಹಿಂದೆ ಬಾಂಗ್ಲಾದೇಶ ಪ್ರವಾಸದಲ್ಲಿಯೂ ಒಂದು ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ತಮ್ಮ ಹಳೆಯ ವಿರಾಟ್ ರೂಪವನ್ನು ಪುನರಾವರ್ತಿಸಿದ್ದಾರೆ. ಈ ಎಲ್ಲ ಸಾಧನೆ ಮೂಲಕ ಅವರು ಐಸಿಸಿ ಬಿಡುಗಡೆ ಮಾಡಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ (ICC ODI Ranking) ನಾಲ್ಕು ಸ್ಥಾನ ಬಡ್ತಿ ಪಡೆದುಕೊಂಡು ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಹೊಸ ಪಟ್ಟಿ ಬಿಡುಗಡೆಯಾಗುವ ಮೊದಲು ವಿರಾಟ್ ಎಂಟನೇ ಸ್ಥಾನದಲ್ಲಿ ಇದ್ದರು.
ವಿರಾಟ್ ಕೊಹ್ಲಿ 750 ರೇಟಿಂಗ್ ಅಂಕಗಳನ್ನು ಹೊಂದುವ ಮೂಲಕ ಪಟ್ಟಿಯಲ್ಲಿ ಮುಂಬಡ್ತಿ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 887 ಅಂಕಗಳನ್ನು ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಪಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದವರಾದ ವಾನ್ಡೆರ್ ಡಸ್ಸನ್ ಹಾಗೂ ಕ್ವಿಂಟನ್ ಡಿ ಕಾಕ್ ನಂತರದ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಬೌಲರ್ಗಳ ಪಟ್ಟಿಯಲ್ಲಿ ಲಂಕಾ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮೊಹಮ್ಮದ್ ಸಿರಾಜ್ ಕೂಡ ಒಂದು ಸ್ಥಾನ ಬಡ್ತಿ ಗಿಟ್ಟಿಸಿಕೊಂಡಿದ್ದಾರೆ. ಅವರೀಗ ಮೂರನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್ನ ಟ್ರೆಂಟ್ ಬೌಲ್ಟ್ ಮೊದಲ ಸ್ಥಾನದಲ್ಲಿ ಇದ್ದರೆ ಆಸ್ಟ್ರೇಲಿಯಾದ ಜೋಶ್ ಹೇಜಲ್ವುಡ್ ಎರಡನೇ ಸ್ಥಾನ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಹಾಗೂ ಅಫಘಾನಿಸ್ತಾನದ ರಶೀದ್ ಖಾನ್ ನಂತರದ ಎರಡು ಸ್ಥಾನ ಗಿಟ್ಟಿಸಿದ್ದಾರೆ.
ಇದನ್ನೂ ಓದಿ | Virat Kohli | ಕಿವೀಸ್ ವಿರುದ್ಧದ ಸರಣಿಯಲ್ಲೂ ವಿರಾಟ್ ಕೊಹ್ಲಿಗಿದೆ ಹಲವು ದಾಖಲೆ ನಿರ್ಮಿಸುವ ಅವಕಾಶ!