Site icon Vistara News

SA vs SL: ಲಂಕಾ ದಹನ ಮಾಡಿದ ನೋರ್ಜೆ; ಹರಿಣ ಪಡೆಗೆ 6 ವಿಕೆಟ್​ ಜಯ

SA vs SL

ನ್ಯೂಯಾರ್ಕ್​: ವೇಗಿ ಅನ್ರಿಜ್​ ನೋರ್ಜೆ(7 ರನ್​ಗೆ 4 ವಿಕೆಟ್​) ಅವರ ಘಾತಕ ಬೌಲಿಂಗ್​ ದಾಳಿಗೆ ತತ್ತರಿಸಿದ ಶ್ರೀಲಂಕಾ(SA vs SL) ತಂಡ ಸೋಮವಾರದ ಟಿ20 ವಿಶ್ವಕಪ್​ ಪಂದ್ಯದಲ್ಲಿ(ICC Mens T20 World Cup 2024) ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್​ಗಳ ಸೋಲಿಗೆ ತುತ್ತಾಗಿದೆ.

ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Nassau County International Cricket Stadium) ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಯಿತು. ಬ್ಯಾಟಿಂಗ್​ ಮರೆತವರಂತೆ ಆಡಿ 19.1 ಓವರ್​ಗಳಲ್ಲಿ ಕೇವಲ 77 ರನ್​ಗೆ ಸರ್ವಪತನ ಕಂಡಿತು. ಇದು ಟಿ20 ವಿಶ್ವಕಪ್​ನಲ್ಲಿ ದಾಖಲಾದ 13ನೇ ಕನಿಷ್ಠ ಮೊತ್ತದ ನಿದರ್ಶನ. ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಪರದಾಟ ನಡೆಸಿ 16.2 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 80 ರನ್​ ಬಾರಿಸಿ ಪ್ರಯಾಸದ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್​ ವೇಳೆ ದಕ್ಷಿಣ ಆಫ್ರಿಕಾ ಕೂಡ ಲಂಕಾ ತಂಡದಂತೇ ಆರಂಭಿಕ ಆಘಾತ ಎದುರಿಸಿತು. 10 ರನ್​ಗೆ ರೀಜಾ ಹೆಂಡ್ರಿಕ್ಸ್(4) ರೂಪದಲ್ಲಿ ಮೊದಲ ವಿಕೆಟ್​ ಕಳೆದುಕೊಂಡಿತು. ಈ ವಿಕೆಟ್​ ಪತನದ ಬಳಿಕ ನಾಯಕ ಐಡೆರ್ನ್​ ಮಾರ್ಕ್ರಮ್​ ಕೂಡ 12ರನ್​ಗೆ ಆಟ ಮುಗಿಸಿದರು. ಟ್ರಿಕ್ಕಿ ಬ್ಯಾಟಿಂಗ್​ ಟ್ರ್ಯಾಕ್​ನಲ್ಲಿ ಹರಿಣ ಪಡೆಯ ಬ್ಯಾಟರ್​ಗಳು ಕೂಡ ಸರಾಗವಾಗಿ ರನ್​ ಗಳಿಸಲು ಕಷ್ಟ ಪಟ್ಟರು. ಹೀಗಾಗಿ ಪವರ್​ ಪ್ಲೇಯಲ್ಲಿ 27 ರನ್​ ಮಾತ್ರ ಒಟ್ಟುಗೂಡಿತು.

ವಿಕೆಟ್​ ಕಳೆದುಕೊಳ್ಳವ ಭಯದಲ್ಲಿ ಕೇವಲ ಒಂದೆರಡು ರನ್​ಗಳ ಓಟಗಳಿಗೆ ಸೀಮಿತರಾಗಿ ಕೊನೆಗೂ ತಂಡವನ್ನು ಗೆಲುವಿನ ದಡ ಸೇರಿದರು. ಚೇಸಿಂಗ್​ ವೇಳೆ ದಾಖಲಾದದ್ದು ಕೇವಲ 3 ಸಿಕ್ಸರ್​ ಮತ್ತು 3 ಬೌಂಡರಿ ಮಾತ್ರ. ಅಷ್ಟರ ಮಟ್ಟಿಗೆ ಆಘಾತಕಾರಿಯಾಗಿತ್ತು ಈ ಪಿಚ್​. ಆರಂಭಿಕ ಆಟಗಾರ ಕ್ವಿಂಟನ್​ ಡಿ ಕಾಕ್​ 10 ಓವರ್​ ತನಕ ಬ್ಯಾಟಿಂಗ್​ ನಡೆಸಿ ಗಳಿಸಿದ್ದು 20 ರನ್ ಮಾತ್ರ. ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಯುವ ಬ್ಯಾಟರ್​ ಟ್ರಿಸ್ಟಾನ್ ಸ್ಟಬ್ಸ್ 28 ಎಸೆತ ಎದುರಿಸಿ 13 ರನ್​ ಕಲೆ ಹಾಕಿದರು. ಕನಿಷ್ಠ ಒಂದು ಬೌಂಡರಿ ಕೂಡ ಬಾರಿಸಲು ಸ್ಟಬ್ಸ್​ಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಹೆನ್ರಿಚ್​ ಕ್ಲಾಸೆನ್​(19*) ಮತ್ತು ಡೇವಿಡ್​ ಮಿಲ್ಲರ್​(6*) ರನ್​ ಗಳಿಸಿ ಅಜೇಯರಾಗಿ ಉಳಿದು ತಂಡದ ಗೆಲುವು ಸಾರಿದರು.

ಲಂಕಾ ಬ್ಯಾಟರ್​ಗಳಿಂದ ಪೆವಿಲಿಯನ್ ಪರೇಡ್


ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ತಂಡದ ಬ್ಯಾಟರ್​ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್​ ಕಳೆದುಕೊಂಡು ಪೆವಿಲಿಯನ್ ಪರೇಡ್​ ನಡೆಸಿದರು. ಯಾರಿಂದಲೂ 20ರ ಗಡಿ ದಾಟಲೂ ಕೂಡ ಅಸಾಧ್ಯವಾಯಿತು. 19 ರನ್​ ಗಳಿಸಿದ ಕುಸಾಲ್ ಮೆಂಡಿಸ್ ಅವರದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಉಳಿದಂತೆ ಅನುಭವಿ, ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್ 16 ರನ್​ ಬಾರಿಸಿದರು. ಉಭಯ ಆಟಗಾರರ ಈ ಸಣ್ಣ ಹೋರಾಟದ ನೆರವಿನಿಂದ ತಂಡ 50ರ ಗಡಿ ದಾಟಲು ಸಾಧ್ಯವಾಯಿತು. ಲಂಕಾ ಪರ ಒಟ್ಟು ನಾಲ್ಕು ಮಂದಿ ಶೂನ್ಯ ಸುತ್ತಿದರು. ಇವರೆಂದರೆ, ಎನ್ ತುಷಾರ, ಮತೀಶ ಪತಿರಾಣ, ನಾಯಕ ವಾನಿಂದು ಹಸರಂಗ ಮತ್ತು ಸಮರವಿಕ್ರಮ. ತಂಡದ ಮೊತ್ತ 50 ಆಗುವ ಮುನ್ನವೇ 6 ವಿಕೆಟ್​ ಕಳೆದುಕೊಂಡ ಲಂಕಾ ತನ್ನ ಸೋಲನ್ನು ಖಚಿತಪಡಿಸಿಕೊಂಡಿತು.

ನೋರ್ಜೆ ಘಾತಕ ಬೌಲಿಂಗ್​


ಈ ಬಾರಿಯ ಐಪಿಎಲ್​ನಲ್ಲಿ ಓವರ್​ಗೆ 30 ರನ್​ ಹೊಡೆಸಿಕೊಳ್ಳುತ್ತಾ ದುಬಾರಿಯಾಗಿ ಕಂಡುಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅನ್ರಿಚ್ ನೋರ್ಜೆ ವಿಶ್ವಕಪ್​ ಟೂರ್ನಿಯಲ್ಲಿ ತಮ್ಮ ಅತ್ಯತ್ತಮ ಬೌಲಿಂಗ್​ ಪ್ರದರ್ಶನ ತೋರ್ಪಡಿಸುವಲ್ಲಿ ಯಶಸ್ವಿಯಾದರು. ಇವರ ಘಾತಕ ಎಸೆತಗಳಿಗೆ ಲಂಕಾ ಬ್ಯಾಟರ್​ಗಳು ತರಗೆಲೆಯಂತೆ ಉದುರಿಕೊಂಡರು. ಒಟ್ಟು 4 ಓವರ್​ ಬೌಲಿಂಗ್​ ನಡೆಸಿದ ನೋರ್ಜೆ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು ಜೀವಮಾನ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಉಳಿದಂತೆ ಸ್ಪಿನ್ನರ್​ ಕೇಶವ್ ಮಹಾರಾಜ್​(22ಕ್ಕೆ 2) ಮತ್ತು ಕಗಿಸೊ ರಬಾಡ(21ಕ್ಕೆ 2) ವಿಕೆಟ್​ ಕಿತ್ತರು.​

Exit mobile version