Site icon Vistara News

Sachin Tendulkar Birthday: ಸವ್ಯಸಾಚಿ ಸಚಿನ್ ತೆಂಡೂಲ್ಕರ್​ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ

Sachin Tendulkar Birthday: Interesting Story About Savyasachi Sachin Tendulkar

Sachin Tendulkar Birthday: Interesting Story About Savyasachi Sachin Tendulkar

ಮುಂಬಯಿ: ಪ್ರತಿ ವರ್ಷವೂ ಸಚಿನ್‌ ತೆಂಡೂಲ್ಕರ್​ ಹುಟ್ಟು ಹಬ್ಬವೆಂದರೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂಭ್ರಮ. ವಿಶ್ವದಾದ್ಯಂತ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌, ಲೆಜೆಂಡರಿ ಕ್ರಿಕೆಟರ್‌, ಕ್ರಿಕೆಟ್‌ ದೇವರು ಎಂದೆಲ್ಲ ನಾಮಾಂಕಿತರಾದ ಸಚಿನ್‌ ತೆಂಡೂಲ್ಕರ್‌ ಅವರು ಸೋಮವಾರ ತಮ್ಮ ಜೀವನದ ಅರ್ಧಶತಕ ಪೂರೈಸಿದ್ದಾರೆ. ಅವರು 50ನೇ ವರ್ಷಕ್ಕೆ ಕಾಲಿಟ್ಟರು. ಅವರಿಗೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ. 24 ವರ್ಷಗಳ ಅವರ ಕ್ರಿಕೆಟ್‌ ಬಾಳ್ವೆಯಲ್ಲಿ ನಡೆದ ಕೆಲ ಸ್ವಾರಸ್ಯಕರ ವಿಚಾರದ ಇಣುಕು ನೋಡ ಇಲ್ಲಿದೆ.

ಸಚಿನ್​ ಹೆದರುತ್ತಿದ್ದ ಬೌಲರ್‌ ಯಾರು?

16ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದರ್ಪಣೆ ಮಾಡಿದ ಸಚಿನ್​ ಅವರು ಅಲ್ಲಿಂದ ವಿಶ್ವಶ್ರೇಷ್ಠ ಆಟಗಾರನಾಗಿ ರೂಪುಗೊಂಡರು. ಸಚಿನ್‌ ಕ್ರೀಸ್​ಗೆ ಬಂದರೆ ಸಾಕು ವಿಶ್ವದ ಯಾವುದೇ ಬೌಲರ್‌ಗಳು ಒಂದು ಕ್ಷಣ ಬೆಚ್ಚಿ ಬೀಳದೇ ಇರುತ್ತಿರಲಿಲ್ಲ. ಅಷ್ಟರಮಟ್ಟಿಗೆ ಸಚಿನ್‌ ಎದುರಾಳಿ ಬೌಲರ್‌ಗಳನ್ನು ಕಾಡಿದ್ದರು. ಭಾರತದೆದುರಿನ ಪಂದ್ಯದ ಮೊದಲ ದಿನ ಸಚಿನ್‌ ಬಗ್ಗೆ ಕನಸು ಬೀಳುತ್ತಿತ್ತು ಎನ್ನುವುದನ್ನು ವಾರ್ನ್ ಹೇಳಿದ್ದನ್ನೊಮ್ಮೆ ನೆನಪಿಸಿಕೊಳ್ಳಿ! ಅಂಥ ಸಚಿನ್‌ ಕೂಡ ಒಬ್ಬ ಬೌಲರ್‌ ವಿರುದ್ಧ ಆಡಲು ಹಿಂದೇಟು ಹಾಕುತ್ತಿದ್ದರು ಎಂದರೆ ನಂಬುತ್ತೀರಾ? ಹೌದು, ದಕ್ಷಿಣ ಆಫ್ರಿಕಾದ ವಿವಾದಿತ ಆಟಗಾರ, ದುರಂತ ಅಂತ್ಯ ಕಂಡ ಹ್ಯಾನ್ಸಿ ಕ್ರೋನಿಯೆ ಎಸೆತಗಳನ್ನು ಎದುರಿಸಲು ಸಚಿನ್‌ ಹಿಂಜರಿಯುತ್ತಿದ್ದರಂತೆ. ಈ ವಿಚಾರವನ್ನು ಸಚಿನ್​ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಇವರನ್ನು ಹೊರತುಪಡಿಸಿ ಮತ್ಯಾವ ಬೌಲರ್​ಗೂ ನಾನು ಹೆದರಲಿಲ್ಲ ಎಂದು ಹೇಳಿದ್ದರು.

ಭಾರತ ರತ್ನ ಸಚಿನ್​

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ Sachin Tedulkar : ಸಿಡ್ನಿ ಕ್ರಿಕೆಟ್​ ಗ್ರೌಂಡ್​ನ ಆಟಗಾರರ ಪ್ರವೇಶ ದ್ವಾರಕ್ಕೆ ಸಚಿನ್​, ಲಾರಾ ಹೆಸರು

2020ರಲ್ಲಿ ಹುಟ್ಟುಹಬ್ಬ ಆಚರಿಸದ ಸಚಿನ್​!

ಪ್ರತಿ ವರ್ಷವೂ ಸಂಭ್ರಮದೊಂದಿಗೆ ಹುಟ್ಟು ಹಬ್ಬ ಆಚರಿಸುತ್ತಿದ್ದ ಸಚಿನ್​ 2020ರಲ್ಲಿ ತಮ್ಮ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೋವಿಡ್​ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ್ದ ಆರೋಗ್ಯ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿರಲಿಲ್ಲ. ಮನೆಯಲ್ಲಿಯೇ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು.

ಈ ಬಾರಿ ಸಚಿನ್​ ಅವರು ತಮ್ಮ 50ನೇ ವರ್ಷದ ಜನ್ಮ ದಿನಾಚರಣೆಯನ್ನು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಆಚರಿಸಿದ್ದಾರೆ. ರೆಸಾರ್ಟ್​ ಒಂದರ ಮುಂದೆ ಚಹಾ​ ಕುಡಿಯುತ್ತಿರುವ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಅವರು​ “ಟೀ ಟೈಮ್​; 50 @ ನಾಟ್​ ಔಟ್”​ ಎಂದು ಬರೆದುಕೊಂಡಿದ್ದಾರೆ. ಸಚಿನ್​ ಅವರಿಗೆ ಗೋವಾ ಎಂದರೆ ಅಚ್ಚುಮೆಚ್ಚು, ಹೀಗಾಗಿ ಅವರು ಈ ಬಾರಿ ತಮ್ಮ ಸ್ಮರಣೀಯ ಹುಟ್ಟು ಹಬ್ಬವನ್ನು ಗೋವಾದಲ್ಲೇ ಆಚರಿಸಿದ್ದಾರೆ.

Exit mobile version