ಮುಂಬಯಿ: ಕ್ರಿಕೆಟ್ ಲೋಕದ ಸವ್ಯಸಾಚಿ, ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಹೀಗೆ ಹಲವು ಹೆಸರಿನಿಂದ ಕರೆಸಿಕೊಳ್ಳುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(sachin tendulkar) ಅವರು ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿ ಒಂದು ದಶಕ ಕಳೆದಿದೆ. ಇದೀಗ ಅವರಿಗೆ ಸ್ಮರಣೀಯ ಗೌರವ ನೀಡಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮುಂದಾಗಿದೆ.
ಟೀಮ್ ಇಂಡಿಯಾ ಮತ್ತು ಮುಂಬೈ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿಲಾಗಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ ಮಂಗಳವಾರ ಪ್ರಕಟಿಸಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಸಚಿನ್ ಅವರ ಪ್ರತಿಮೆಯನ್ನು ಅವರ 50ನೇ ಜನ್ಮದಿನದಂದು (ಏಪ್ರಿಲ್ 24) ಅನಾವರಣಗೊಳಿಸಲಾಗುವುದು ಅಥವಾ ವರ್ಷಾಂತ್ಯದಲ್ಲಿ ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ವೇಳೆ ಅನಾವರಣ ಮಾಡುವ ಸಾಧ್ಯತೆ ಇದೆ ಎಂದು ವರಿಯಾಗಿದೆ.
“ಈ ಪ್ರತಿಮೆ ಐತಿಹಾಸಿಕ ಸ್ಥಳದಲ್ಲಿ ಸ್ಥಾಪಿಸಲಾಗುವ ಮೊದಲ ಪ್ರತಿಮೆಯಾಗಲಿದೆ. ಅದನ್ನು ಎಲ್ಲಿ ಸ್ಥಾಪಿಸಲಾಗುವುದು ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ” ಎಂದು ಅಮೋಲ್ ಕಾಳೆ ತಿಳಿಸಿದ್ದಾರೆ.
“ಸಚಿನ್ ಅವರು ಭಾರತದ ಕ್ರಿಕೆಟ್‌ಗಾಗಿ ಏನೆಲ್ಲ ಕೊಡುಗೆ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು 50 ವರ್ಷಕ್ಕೆ ಕಾಲಿಡುತ್ತಿದ್ದಂತೆ, ಎಂಸಿಎ ಕಡೆಯಿಂದ ಸಣ್ಣ ಉಡುಗೊರೆ ನೀಡಲು ನಿರ್ಧರಿಸಿದ್ದೇವೆ. ನಾನು ಮೂರು ವಾರಗಳ ಹಿಂದೆ ಸಚಿನ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಪ್ರತಿಮೆ ಸ್ಥಾಪನೆಗೆ ಅವರ ಒಪ್ಪಿಗೆಯನ್ನು ಸ್ವೀಕರಿಸಲಾಗಿದೆ” ಎಂದು ಅಮೋಲ್ ಕಾಳೆ ತಿಳಿಸಿದ್ದಾರೆ.
ಇದನ್ನೂ ಓದಿ Sachin Tendulkar : ದೇಸಿ ಕ್ರಿಕೆಟ್ನ ಅದ್ಭುತ ಕ್ಯಾಚ್ಗೆ ಸಚಿನ್ ತೆಂಡೂಲ್ಕರ್ ಫಿದಾ; ಏನಂದರು ಅವರು?
ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್ ತೆಂಡೊಲ್ಕರ್, ನನ್ನ ವೃತ್ತಿ ಜೀವನ ಈ ಮೈದಾನದಿಂದ ಪ್ರಾರಂಭವಾಗಿತ್ತು. ನನ್ನ ಜೀವನದ ಅತಿದೊಡ್ಡ ಕ್ರಿಕೆಟ್ ಕ್ಷಣವೆಂದರೆ 2011ರಲ್ಲಿ ನಾವು ವಿಶ್ವ ಕಪ್ ನಲ್ಲಿ ಗೆಲುವು ಸಾಧಿಸಿದ್ದು. ಹೆಚ್ಚಿನ ನನ್ನ ನೆನಪುಗಳು ಈ ಕ್ರೀಡಾಂಗಣದಲ್ಲಿದೆ ಎಂದಿದ್ದಾರೆ.
ಸಚಿನ್ ತನ್ನ ಕೊನೆಯ ಟೆಸ್ಟ್ ಅಂತಾರಾಷ್ಟ್ರೀಯ ಪಂದ್ಯವನ್ನು 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ್ದರು. 2012ರಲ್ಲಿ ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಸಾರಸ್ಯವೆಂದರೆ ಸಚಿನ್ ತಮ್ಮ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ್ದು ಮತ್ತು ವಿದಾಯ ಹೇಳಿದ್ದು ಪಾಕಿಸ್ತಾನ ತಂಡದ ವಿರುದ್ಧ.