Site icon Vistara News

Sachin Tendulkar : ವಿಶೇಷಚೇತನ ಕ್ರಿಕೆಟರ್​ ಅಮೀರ್​ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ

Sachin Tendulkar

ನವ ದೆಹಲಿ: ಕಳೆದ ತಿಂಗಳು, ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಜಮ್ಮು ಮತ್ತು ಕಾಶ್ಮೀರದ ವಿಕಲಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. 200 ಟೆಸ್ಟ್, 463 ಏಕದಿನ ಮತ್ತು 1 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಚಿನ್, ಕ್ರಿಕೆಟಿಗನನ್ನು ಭೇಟಿಯಾಗಿ ಅವರ ಹೆಸರಿನ ಜರ್ಸಿಯನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದರು. ಅಂತೆಯೇ ಅವರು ಇದೀಗ ಜೆರ್ಸಿಯನ್ನು ಪಡೆದುಕೊಂಡಿದ್ದಾರೆ.

ತಮ್ಮ ಮಾತುಗಳಿಗೆ ಬದ್ಧರಾಗಿರುವ ತೆಂಡೂಲ್ಕರ್, ಕಾಶ್ಮೀರ ಪ್ರವಾಸದಲ್ಲಿ ಅಮೀರ್ ಅವರನ್ನು ಭೇಟಿಯಾದರು. ಕ್ರಿಕೆಟ್ ಐಕಾನ್ ಅಮೀರ್ ಅವರೊಂದಿಗಿನ ಸಂವಾದದ ವೀಡಿಯೊವನ್ನು ಇನ್ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ, “ಅಮೀರ್, ನಿಜವಾದ ಹೀರೋ. ಸ್ಫೂರ್ತಿದಾಯಕವಾಗಿರಿ! ನಿಮ್ಮನ್ನು ಭೇಟಿಯಾಗಿದ್ದರಿಂದ ಸಂತೋಷವಾಯಿತು.” ಎಂದು ಬರೆದುಕೊಂಡಿದ್ದಾರೆ.

ವಿಡಿಯೊಕ್ಲಿಪ್​ನಲ್ಲಿ ಸಚಿನ್ ತೆಂಡೂಲ್ಕರ್, ಅಮೀರ್ ಹುಸೇನ್ ಲೋನ್ ಜತೆ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು. ಕಾಶ್ಮೀರದ ವಾಘಮಾ ಗ್ರಾಮದವರಾದ ಅಮೀರ್ ಹುಸೇನ್ ಲೋನ್ ತನ್ನ ತಂದೆಯ ಗಿರಣಿಯಲ್ಲಿ ಕೆಲಸ ಮಾಡುವಾಗ ಎಂಟನೇ ವಯಸ್ಸಿನಲ್ಲಿ ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಅದು ಕ್ರಿಕೆಟ್ ಮೇಲಿನ ಅವರ ಪ್ರೀತಿಯನ್ನು ಕುಗ್ಗಿಸಲಿಲ್ಲ . ಅಂತಿಮವಾಗಿ, ಶಿಕ್ಷಕರೊಬ್ಬರು ಅವರ ಪ್ರತಿಭೆಯನ್ನು ಕಂಡುಹಿಡಿದರು. ಅವರನ್ನು ವೃತ್ತಿಪರ ಕ್ರೀಡೆಗೆ ಪರಿಚಯಿಸಿದ್ದರು,

ಕಳೆದ ತಿಂಗಳು ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡುವ ವೇಳೆ ಅಮೀರ್ ತಮ್ಮ ಜೀವನದ ಕಷ್ಟದ ಕಥನವನ್ನು ತೆರೆದಿಟ್ಟದ್ದರು.

“ಅಪಘಾತದ ನಂತರ, ನಾನು ಭರವಸೆಯನ್ನು ಕಳೆದುಕೊಳ್ಳಲಿಲ್ಲ ಮತ್ತು ಕಷ್ಟಪಟ್ಟು ಕೆಲಸ ಮಾಡಿದೆ. ನಾನು ಎಲ್ಲವನ್ನೂ ನಾನೇ ಮಾಡಬಲ್ಲೆ ಮತ್ತು ನಾನು ಯಾರ ಮೇಲೂ ಅವಲಂಬಿತವಾಗಿಲ್ಲ. ನನ್ನ ಅಪಘಾತದ ನಂತರ ಯಾರೂ ನನಗೆ ಸಹಾಯ ಮಾಡಲಿಲ್ಲ. ಸರ್ಕಾರ ಕೂಡ ನನ್ನನ್ನು ಬೆಂಬಲಿಸಲಿಲ್ಲ ಆದರೆ ನನ್ನ ಕುಟುಂಬವು ಯಾವಾಗಲೂ ನನ್ನೊಂದಿಗೆ ಇತ್ತು” ಎಂದು ಅಮೀರ್ ಹೇಳಿಕೊಂಡಿದ್ದರು.

ಇದನ್ನೂ ಓದಿ : Rohit Sharma : 2 ರನ್​ಗೆ ಔಟಾದ ರೋಹಿತ್​ ಶರ್ಮಾ ಗೇಲಿ ಮಾಡಿದ ಇಂಗ್ಲೆಂಡ್ ಅಭಿಮಾನಿಗಳು

“ನಾನು 2013 ರಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. 2018 ರಲ್ಲಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದೇನೆ. ನಂತರ ನೇಪಾಳ, ಶಾರ್ಜಾ ಮತ್ತು ದುಬೈನಲ್ಲಿ ಕ್ರಿಕೆಟ್ ಆಡಿದೆ. ನಾನು ನನ್ನ ಕಾಲುಗಳೊಂದಿಗೆ (ಬೌಲಿಂಗ್) ಮಾಡುವುದನ್ನು ಮತ್ತು ನನ್ನ ಭುಜ ಮತ್ತು ಕುತ್ತಿಗೆಯಿಂದ ಬ್ಯಾಟಿಂಗ್ ಮಾಡುವುದನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಕ್ರಿಕೆಟ್ ಆಡಲು ನನಗೆ ಶಕ್ತಿ ನೀಡಿದ ದೇವರಿಗೆ ಧನ್ಯವಾದಗಳು, “ಎಂದು ಅವರು ಹೇಳಿಕೊಂಡಿದ್ದರು.

Exit mobile version