ಮುಂಬಯಿ: ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಲೆಗ್ ಸ್ಪಿನ್ನರ್ ಶೇನ್ ವಾರ್ನ್(Shane Warne) ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಅವರ ಮೊದಲ ಪುಣ್ಯಸ್ಮರಣೆ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಭಾವನಾತ್ಮಕ ಸಂದೇಶವೊಂದನ್ನು ಬರೆದಿದ್ದಾರೆ.
52 ವರ್ಷದ ಶೇನ್ ವಾರ್ನ್ ಮಾರ್ಚ್ 4, 2022ರಲ್ಲಿ ಥಾಯ್ಲೆಂಡ್‌ನ ವಿಲ್ಲಾದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಈ ಸುದ್ದಿ ಕೇಳಿ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿದಿತ್ತು. ಇದೀಗ ವಾರ್ನ್ ನಮ್ಮಿಂದ ದೂರವಾಗಿ ಒಂದು ವರ್ಷ ಕಳೆದಿದೆ. ವಾರ್ನ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ದಿನದಂದು ಸಚಿನ್ ಅವರು ಶೇನ್ ವಾರ್ನ್ ಜತೆಗಿರುವ ಫೋಟೊವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಭಾವನಾತ್ಮಕ ಸಂದೇಶವೊಂದನ್ನು ಬರೆದಿದ್ದಾರೆ.
“ವಾರ್ನ್ ಅವರು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಇದು ಕೇವಲ ಒಬ್ಬ ಕ್ರಿಕೆಟಿಗನಾಗಿ ಮಾತ್ರವಲ್ಲದೆ ಒಬ್ಬ ಉತ್ತಮ ಗೆಳೆಯನಾಗಿಯೂ ನಾನು ನಿಮ್ಮನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ. ನೀವಿದ್ದ ಜಾಗದಲ್ಲಿ ಹರುಷಕ್ಕೆ ಕೊರತೆ ಇರುತ್ತಿರಲಿಲ್ಲ. ನೀವು ನಮ್ಮಿಂದ ದೂರವಾದರೂ ನಾವಿಬ್ಬರು ಜತೆಯಾಗಿ ಮೈದಾನದಲ್ಲಿ ನಡೆಸಿದ ಸ್ಪರ್ಧೆ ಮತ್ತು ಮೈದಾನದ ಹೊರಗೆ ನಮ್ಮ ಹಾಸ್ಯಮಯ ಕ್ಷಣಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ವಿಲ್ ಮಿಸ್ ಯು ವಾರ್ನಿ ಎಂದು ಸಚಿನ್ ಭಾವನಾತ್ಮಕ ಪತ್ರವನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Sachin Tendulkar: ಬಿಲ್ ಗೇಟ್ಸ್ ಭೇಟಿಯಾದ ಸಚಿನ್ ತೆಂಡೂಲ್ಕರ್
ಮೈದಾನದಲ್ಲಿ ಸಚಿನ್ ಮತ್ತು ವಾರ್ನ್ ಎಷ್ಟೇ ಡೆಡ್ಲಿ ವಿರೋಧಿಗಳಾಗಿದ್ದರೂ ವೈಯಕ್ತಿಕವಾಗಿ ಸಂಬಂಧ ತುಂಬಾ ಚೆನ್ನಾಗಿತ್ತು. ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಆದರೆ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ವಿರುದ್ಧ ಹೆಚ್ಚಿನ ಮೇಲುಗೈ ಸಾಧಿಸಿದ್ದರು. ಕ್ರೀಡಾಂಗಣದಲ್ಲಿ ಈ ಇಬ್ಬರ ಜಿದ್ದಾಜಿದ್ದಿನ ಹೋರಾಟವನ್ನು ನೋಡುವುದೇ ಅಭಿಮಾನಿಗಳಿಗೆ ಹಬ್ಬವಾಗಿತ್ತು.