Site icon Vistara News

Sachin Tendulkar: ನಾಳೆ ವಾಂಖೆಡೆ ಸ್ಟೇಡಿಯಂನಲ್ಲಿ ತೆಂಡೂಲ್ಕರ್​ ಪ್ರತಿಮೆ ಅನಾವರಣ

Sachin Tendulkar

ಮುಂಬಯಿ: ಕ್ರಿಕೆಟ್ ಲೋಕದ ಸವ್ಯಸಾಚಿ, ಕ್ರಿಕೆಟ್​ ದೇವರು, ಮಾಸ್ಟರ್‌ ಬ್ಲಾಸ್ಟರ್‌ ಹೀಗೆ ಹಲವು ಹೆಸರಿನಿಂದ ಕರೆಸಿಕೊಳ್ಳುವ ಟೀಮ್​ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(sachin tendulkar)​ ಅವರ ಪ್ರತಿಮೆ(Sachin Tendulkar statue) ನಾಳೆ (ನವೆಂಬರ್​ 1ರಂದು) ವಾಂಖೆಡೆ ಸ್ಟೇಡಿಯಂನಲ್ಲಿ(wankhede stadium) ಅನಾವರಣಗೊಳಿಸಲು ನಿರ್ಧರಿಸಲಾಗಿದೆ. ನವೆಂಬರ್​ 2ರಂದು ಇಲ್ಲಿ ಭಾರತ ಮತ್ತು ಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ದಿನ ಸಚಿನ್​ ಅವರ ಪ್ರತಿಮೆ ಅನಾವರಣ ಸಮಾರಂಭ ನಡೆಸಲು ಮುಂಬೈ ಕ್ರಿಕೆಟ್​ ಅಸೋಸಿಯೇಸನ್​ ಮತ್ತು ಬಿಸಿಸಿಐ ನಿರ್ಧರಿಸಿದೆ.

ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ತೆಂಡೂಲ್ಕರ್​ ಪ್ರತಿಮೆ ನಿರ್ಮಾಣದ ಬಗ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ ಅಧಿಕೃತ ಮಾಹಿತಿ ನೀಡಿದ್ದರು. “ಟೀಮ್​ ಇಂಡಿಯಾ ಮತ್ತು ಮುಂಬೈ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿಲಾಗಿದೆ. ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್​ ಟೂರ್ನಿಯ ಸಮಯದಲ್ಲಿ ಸಚಿನ್​ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತದೆ” ಎಂದು ಹೇಳಿದ್ದರು. ಅದರಂತೆ ನವೆಂಬರ್​ 1 ರಂದು ಪ್ರತಿಮೆ ಅನಾವರಣ ಮಾಡಲಾಗುತ್ತದೆ ಎಂದು ಕಾಳೆ ತಿಳಿಸಿರುವುದಾಗಿ ವರದಿಯಾಗಿದೆ.

ಸಚಿನ್​ ಉಪಸ್ಥಿತಿ

ಉದ್ಘಾಟನಾ ಸಮಾರಂಭದಲ್ಲಿ ತೆಂಡೂಲ್ಕರ್ ಅವರೇ ಉಪಸ್ಥಿತರಿರಲಿದ್ದಾರೆ ಎಂದು ಅಮೋಲ್ ಕಾಳೆ ತಿಳಿಸಿದ್ದಾರೆ. ಅಲ್ಲದೆ ಇತರ ಕಾರ್ಯಕ್ರಮದ ಬಗ್ಗೆ ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಸಚಿನ್​ ಹೆಸರಿನ ಒಂದು ಸ್ಟ್ಯಾಂಡ್​ ಈ ಸ್ಟೇಡಿಯಂನಲ್ಲಿ ಇದೆ.

ಅಂದು ತಮ್ಮ ಪ್ರತಿಮೆ ಸ್ಥಾಪನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿನ್​ ತೆಂಡೂಲ್ಕರ್​ ಅವರು, “ನನ್ನ ವೃತ್ತಿ ಜೀವನ ಈ ಮೈದಾನದಿಂದ ಪ್ರಾರಂಭವಾಗಿತ್ತು. ನನ್ನ ಜೀವನದ ಅತಿದೊಡ್ಡ ಕ್ರಿಕೆಟ್ ಕ್ಷಣವೆಂದರೆ 2011ರಲ್ಲಿ ನಾವು ವಿಶ್ವ ಕಪ್ ನಲ್ಲಿ ಗೆಲುವು ಸಾಧಿಸಿದ್ದು. ಹೆಚ್ಚಿನ ನನ್ನ ನೆನಪುಗಳು ಈ ಕ್ರೀಡಾಂಗಣದಲ್ಲಿದೆ” ಎಂದಿದ್ದರು.

ಇದನ್ನೂ ಓದಿ AUS vs NZ: ಶತಕ ಬಾರಿಸಿ ವಿಶ್ವಕಪ್​ನಲ್ಲಿ ಸಚಿನ್​ ದಾಖಲೆ ಸರಿಗಟ್ಟಿದ ರಚಿನ್ ರವೀಂದ್ರ

ಸಚಿನ್ ತನ್ನ ಕೊನೆಯ ಟೆಸ್ಟ್​ ಅಂತಾರಾಷ್ಟ್ರೀಯ ಪಂದ್ಯವನ್ನು 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ್ದರು. 2012ರಲ್ಲಿ ಅವರು ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಸಾರಸ್ಯವೆಂದರೆ ಸಚಿನ್​ ತಮ್ಮ ಏಕದಿನ ಕ್ರಿಕೆಟ್​ ಪದಾರ್ಪಣೆ ಮಾಡಿದ್ದು ಮತ್ತು ವಿದಾಯ ಹೇಳಿದ್ದು ಪಾಕಿಸ್ತಾನ ತಂಡದ ವಿರುದ್ಧ.

ಕ್ರಿಕೆಟ್​ ಆಟಗಾರರಿಗೆ ಸ್ಫೂರ್ತಿ

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

Exit mobile version