ಮುಂಬಯಿ: ಕ್ರಿಕೆಟ್ ದೇವರು ಎಂದೇ ಖ್ಯಾತಿ ಗಳಿಸಿರುವ ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಹಲವು ದಾಖಲೆಗಳ ಸರದಾರ ಎನಿಸಿಕೊಂಡಿರುವುದು ನಮಗೆಲ್ಲ ತಿಳಿದೇ ಇದೆ. ಇಂದಿಗೂ ಅವರು ಯುವ ಆಟಗಾರರಿಗೆ ಸ್ಫೂತಿಯಾಗಿದ್ದಾರೆ. ಶತಕಕಗಳ ಶತಕ ಬಾರಿಸಿರುವ ಸಚಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಶತಕ(Sachin Tendulkar maiden century) ಬಾರಿಸಿದಾಗ ಅವರಿಗಿನ್ನೂ 17 ವರ್ಷ. ಆ ಮೊದಲ ಶತಕಕ್ಕೆ ಇಂದಿಗೆ 34 ವರ್ಷಗಳ ಸಂಭ್ರಮ. ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಸಚಿನ್ ಅವರ ಅಂದಿನ ಶತಕ ಫೊಟೊ ಹಂಚಿಕೊಂಡು ಶತಕದ ದಿನವನ್ನು ನೆನಪಿಸಿಕೊಂಡಿದೆ.
ಹೌದು, 1990 ಆಗಸ್ಟ್ 14ರಂದು ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್(Old Trafford) ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು. ಇದೇ ವೇಳೆ ಟೆಸ್ಟ್ ಮಾದರಿಯಲ್ಲಿ ಶತಕ ದಾಖಲಿಸಿದ ಮೂರನೇ-ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆಗ ಅವರಿಗೆ ಕೇವಲ 17 ವರ್ಷ ಪ್ರಾಯ.
ಅಂದು 189 ಎಸೆತ ಎದುರಿಸಿದ್ದ ಸಚಿನ್ ಅಜೇಯ 119 ರನ್ ಗಳಿಸಿದ್ದರು. 1989ರ ನವೆಂಬರ್ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಸಚಿನ್ ಎಂಟು ಟೆಸ್ಟ್ ಪಂದ್ಯಗಳ ಬಳಿಕ ಶತಕ ಬಾರಿಸಿದ್ದರು. ಓಲ್ಡ್ ಟ್ರಾಫರ್ಡ್ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಸಚಿನ್ ಈ ಶತಕದ ಆಟವಾಡಿದ್ದರು. ಇದರ ಸಹಾಯದಿಂದ ಭಾರತ ತಂಡ ಈ ಪಂದ್ಯವನ್ನು ಡ್ರಾ ಮಾಡಲು ಸಾಧ್ಯವಾಯಿತು. ಟೆಸ್ಟ್ ಕ್ರಿಕೆಟ್ನಲ್ಲಿ 51 ಶತಕ ಬಾರಿಸಿದ್ದ ವಿಶ್ವ ದಾಖಲೆ ಈಗಲೂ ಸಚಿನ್ ಹೆಸರಿನಲ್ಲಿದೆ. ಸಚಿನ್ ಟೆಸ್ಟ್ನಲ್ಲಿ 15,921 ರನ್ ಗಳಿಸಿದ್ದಾರೆ.
ಇದನ್ನೂ ಓದಿ Vinesh Phogat : ವಿನೇಶ್ ಪೋಗಟ್ಗೆ ಬೆಳ್ಳಿ ಪದಕ ಕೊಡಿ; ಕುಸ್ತಿಪಟುವಿನ ಬೆಂಬಲಕ್ಕೆ ನಿಂತ ಸಚಿನ್ ತೆಂಡೂಲ್ಕರ್
ಸಚಿನ್ ಅವರು 24 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್, 201 ವಿಕೆಟ್, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್ ಎಲ್ಲ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.